ವೀಸಾ ಅವಧಿ ಮುಗಿದವರನ್ನು ಇರಿಸಲು ಪ್ರತ್ಯೇಕ ಕೇಂದ್ರ ತೆರೆಯಿರಿ: ಹೈಕೋರ್ಟ್ ಸೂಚನೆ

ಬೆಂಗಳೂರು, ಫೆ.11: ವೀಸಾ ಅವಧಿ ಮುಗಿದ ಬಳಿಕವೂ ರಾಜ್ಯದಲ್ಲಿ ನೆಲೆಸಿರುವ ವಿದೇಶಿಗರನ್ನು ಇರಿಸಲು ಪ್ರತ್ಯೇಕ ಕೇಂದ್ರವೊಂದನ್ನು ತೆರೆಯಲು ರಾಜ್ಯ ಸರಕಾರಕ್ಕೆ ಹೈಕೋರ್ಟ್ ಸೂಚಿಸಿ, ಆದೇಶವನ್ನು ಕಾಯ್ದಿರಿಸಿದೆ.
ಜಾಮೀನು ಕೋರಿ ನೈಜೀರಿಯಾ ಪ್ರಜೆಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯ ಮೂರ್ತಿ ಎ.ವಿ.ಚಂದ್ರಶೇಖರ್ ಅವರಿದ್ದ ಏಕಸದಸ್ಯ ಪೀಠ, ಈ ಆದೇಶ ನೀಡಿದೆ.
ಕೇಂದ್ರ ಸರಕಾರದ ಹೇಳಿಕೆ ಹಾಗೂ ಭಾರತ ಸರಕಾರದ ಮೃದು ಧೋರಣೆಯನ್ನು ವಿದೇಶಿಗರು ದುರುಪಯೋಗಪಡಿಸಿಕೊಳ್ಳ ಬಾರದು. ವಿದೇಶಿ ಕಾಯ್ದೆಗೆ ಅನುಗುಣವಾಗಿ ನಡೆದುಕೊಳ್ಳಬೇಕೆಂಬ ಸಲಹೆಯನ್ನು ವಿದೇಶಿಗರಿಗೆ ನೀಡಿದ ನ್ಯಾಯಪೀಠ ವಶದಲ್ಲಿರುವ ವಿದೇಶಿಗರನ್ನು ಇರಿಸಲು ಪ್ರತ್ಯೇಕ ಕೇಂದ್ರವೊಂದನ್ನು ತೆರೆಯಲು ರಾಜ್ಯ ಸರಕಾರಕ್ಕೆ ಸೂಚಿಸಿತು.
ಸಹಾಯಕ ಸಾಲಿಸಿಟರ್ ಜನರಲ್ ಕೃಷ್ಣ ಎಸ್.ದೀಕ್ಷಿತ್ ಮಾತನಾಡಿ, ರಾಜ್ಯದಲ್ಲಿ ಒಟ್ಟು 30 ಸಾವಿರ ಜನರು ವಿದೇಶಿಗರಿದ್ದು, ಇವರಲ್ಲಿ 1,165 ಜನರ ವೀಸಾ ಅವಧಿ ಮುಗಿದಿದೆ. ಹೀಗಾಗಿ, ಇವರಿಗೆ ಈ ಮಣ್ಣಿನ ಕಾನೂನಿನಂತೆ ಶಿಕ್ಷೆಯನ್ನು ವಿಧಿಸಬೇಕು ಎಂದರು. ವಿದೇಶಿ ಕಾಯ್ದೆ ಪ್ರಕಾರ ವೀಸಾ ಅವಧಿ ಮುಗಿದ ಮೇಲೆ ರಾಜ್ಯದಲ್ಲಿ ನೆಲೆಸುವಂತಿಲ್ಲ. ಆದರೆ, ವಿದೇಶಿಗರು ವೀಸಾ ಅವಧಿ ಮುಗಿದರೂ ರಾಜ್ಯದಲ್ಲಿ ನೆಲೆಸಿದ್ದು, ಇವರನ್ನು ಕಪ್ಪು ಪಟ್ಟಿ(ಬ್ಲಾಕ್‌ಲಿಸ್ಟ್)ಗೆ ಸೇರಿಸಬೇಕೆಂದು ಮನವಿ ಮಾಡಿಕೊಂಡರು. ಸರಕಾರಿ ವಕೀಲ ಪೊನ್ನಣ್ಣ ಮಾತನಾಡಿ, ವೀಸಾ ಅವಧಿ ಮುಗಿದ ವಿದೇಶಗರಿಗೆ 3 ದಿನ ಕಾರಾಗೃಹ ಶಿಕ್ಷೆ ಅಥವಾ 10 ಸಾವಿರ ರೂ. ದಂಡ ವಿಧಿಸಿದರೆ ಸಾಲದು, ಅವರ ವಿರುದ್ಧ ಕ್ರಮ ಕೈಗೊಳ್ಳಲು ಕೇಂದ್ರ ಸರಕಾರಕ್ಕೆ ಸೂಚನೆ ನೀಡಬೇಕೆಂದು ಮನವಿ ಮಾಡಿಕೊಂಡರು. ಅಲ್ಲದೆ, ಈ ವಿದೇಶಿಗರು ವೀಸಾ ಅವಧಿ ಮುಗಿದ ಮೇಲೂ ರಾಜ್ಯದಲ್ಲಿ ನೆಲೆಸಿ ಅಪರಾಧ ಕೃತ್ಯಗಳನ್ನು ಎಸಗುತ್ತಾರೆ. ಹೀಗಾಗಿ, ಸೂಕ್ತ ಶಿಕ್ಷೆಯನ್ನು ವಿಧಿಸಬೇಕೆಂಬ ವಾದ ಮಂಡಿಸಿದರು. ಅರ್ಜಿದಾರರ ಪರವಾಗಿ ಮಾತನಾಡಿದ ವಕೀಲರು ವಿದೇಶಿಗರು ವೀಸಾ ಅವಧಿ ಮುಗಿದ ಮೇಲೂ ರಾಜ್ಯದಲ್ಲಿ ಇರಬೇಕೆಂಬ ಆಸೆ ಇರುವುದಿಲ್ಲ. ಆದರೆ, ಇವರನ್ನು ಭಾರತಕ್ಕೆ ಕಳುಹಿಸಿರುವ ಸಂಘ-ಸಂಸ್ಥೆಗಳು ವೀಸಾ ಅವಧಿಯನ್ನು ವಿಸ್ತರಿಸುವ ಹಾಗೂ ವಾಪಸ್ ಸ್ವದೇಶಕ್ಕೆ ಕರೆಸಿಕೊಳ್ಳುವುದು ವಿಳಂಬವಾಗುವುದರಿಂದ ವೀಸಾ ಅವಧಿ ಮುಗಿದಿರುತ್ತದೆ. ಆದರೆ, ವಿದೇಶಿಗರದು ಇದರಲ್ಲಿ ಯಾವುದೇ ತಪ್ಪು ಇರುವುದಿಲ್ಲ ಎಂಬ ವಾದವನ್ನು ಮಂಡಿಸಿದರು.
ವಕೀಲರ ವಾದ ಪ್ರತಿವಾದವನ್ನು ಆಲಿಸಿದ ನ್ಯಾಯಪೀಠವು ಆದೇಶವನ್ನು ಕಾಯ್ದಿರಿಸಿದರು.







