ವೀರಯೋಧರ ಬಲಿದಾನ ಯುವಕರಿಗೆ ಪ್ರೇರಣೆ: ಡಾ.ಜಿ.ಪರಮೇಶ್ವರ್
ಬೆಂಗಳೂರು, ಫೆ.11: ದೇಶ ಸೇವೆಗೆ ಮುಂದಾಗುವ ಯುವಕರಿಗೆ ನಾಡಿನ ಹುತಾತ್ಮ ವೀರಯೋಧರಾದ ಹನುಮಂತಪ್ಪ ಕೊಪ್ಪದ, ಸಿ.ಮಹೇಶ್ ಹಾಗೂ ಟಿ.ನಾಗೇಶ್ ಪ್ರೇರಣೆಯಾಗಿದ್ದಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಬಣ್ಣಿಸಿದ್ದಾರೆ.
ಸಿಯಾಚಿನ್ ಪ್ರದೇಶದ ನೀರ್ಗಲ್ಲ ಹಿಮಪಾತದಲ್ಲಿ ಸಿಲುಕಿ ಪವಾಡ ಸದೃಶದಲ್ಲಿ ಪಾರಾಗಿ ಆಸ್ಪತ್ರೆಯಲ್ಲಿ ಜೀವನ್ಮರಣದ ಜೊತೆ ಹೋರಾಡಿ ಚಿಕಿತ್ಸೆ ಫಲಕಾರಿಯಾಗದೆ ವೀರಮರಣವನ್ನಪ್ಪಿದ ಹನುಮಂತಪ್ಪ ಕೊಪ್ಪದ ನಿಧನಕ್ಕೆ ತೀವ್ರ ಸಂತಾಪವನ್ನು ವ್ಯಕ್ತಪಡಿಸುವುದಾಗಿ ಅವರು ಹೇಳಿದ್ದಾರೆ.
ಅದೇ ರೀತಿ ಯೋಧರಾದ ಎಚ್.ಡಿ.ಕೋಟೆ ತಾಲೂಕಿನ ಸಿ.ಮಹೇಶ್ ಹಾಗೂ ಹಾಸನ ಜಿಲ್ಲೆಯ ತೇಜೂರು ಗ್ರಾಮದ ಟಿ.ನಾಗೇಶ್ ದೇಶಸೇವೆಗಾಗಿ ತಮ್ಮ ಪ್ರಾಣವನ್ನು ಅರ್ಪಿಸಿದ್ದಾರೆ. ಇವರ ದೇಶ ಸೇವೆಯನ್ನು ಸ್ಮರಿಸಿ, ಹನುಮಂತಪ್ಪ ಕೊಪ್ಪದ ಬದುಕಿ ಬರಲೆಂದು ಇಡೀ ದೇಶವೇ ಪ್ರಾರ್ಥಿಸುತ್ತಿತ್ತು. ಆದರೆ ಅದು ಫಲಿಸಲಿಲ್ಲ ಎಂದು ಅವರು ತಿಳಿಸಿದ್ದಾರೆ.
ಈ ಮೂವರು ಯೋಧರ ಆತ್ಮಕ್ಕೆ ಭಗವಂತನು ಚಿರಶಾಂತಿಯನ್ನು ನೀಡಲಿ. ಮೃತರ ಕುಟುಂಬದವರಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ನಮ್ಮ ಸರಕಾರವು ಅವರ ಕುಟುಂಬಕ್ಕೆ ಅಗತ್ಯವಿರುವ ಎಲ್ಲ ನೆರವನ್ನು ನೀಡಲು ಸಿದ್ಧವಿದ್ದು, ಈ ಬಗ್ಗೆ ಮುಖ್ಯಮಂತ್ರಿಯೊಂದಿಗೆ ಚರ್ಚೆ ನಡೆಸುತ್ತೇನೆ ಎಂದು ಪರಮೇಶ್ವರ್ ಪ್ರಕಟಣೆಯಲ್ಲಿ ಹೇಳಿದ್ದಾರೆ.
ವೀರಯೋಧರ ಕುಟುಂಬ ವರ್ಗದವರು ಅಧೀರರಾಗುವುದು ಬೇಡ. ಸರಕಾರ ಅವರ ಬೆನ್ನಿಗಿದೆ. ದೇಶಸೇವೆಯನ್ನು ತನ್ನ ಉಸಿರಾಗಿಸಿಕೊಂಡು ಮಾಡಿರುವ ಪ್ರಾಣತ್ಯಾಗಕ್ಕೆ ಬೆಲೆಕಟ್ಟಲು ಸಾಧ್ಯವಿಲ್ಲ. ಅವರ ಸೇವೆ ಹಾಗೂ ತ್ಯಾಗವನ್ನು ನಾವೆಲ್ಲ ಸ್ಮರಿಸೋಣ. ಅವರ ದೇಶ ಸೇವೆ ಯುವಜನರಿಗೆ ಪ್ರೇರಣೆಯಾಗಿದೆ ಎಂದು ಅವರು ಹೇಳಿದ್ದಾರೆ.





