‘ರಾಜ್ಯದ ಆರೋಗ್ಯ ಯೋಜನೆಗಳ ಬಗ್ಗೆ ಯೂರೋಪ್ ಸಂಸದರಿಗೆ ಮಾಹಿತಿ’
ಬೆಂಗಳೂರು, ಫೆ.11: ರಾಜ್ಯ ಸರಕಾರದ ವತಿಯಿಂದ ಜಾರಿಯಲ್ಲಿರುವ ಆರೋಗ್ಯಕ್ಕೆ ಸಂಬಂಧಿಸಿದ ವಿವಿಧ ಯೋಜನೆಗಳ ಯೂರೋಪ್ ಖಂಡದ ಸಂಸತ್ ಸದಸ್ಯರು ರಾಜ್ಯದ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಭಾರತೀಯ ಕುಟುಂಬ ಕಲ್ಯಾಣ ಸಂಸ್ಥೆ ವತಿಯಿಂದ ಆಯೋಜಿಸಲಾಗಿರುವ ಪ್ರವಾಸದ ಹಿನ್ನೆಲೆಯಲ್ಲಿ ಗುರುವಾರ ವಿಧಾನಸೌಧಕ್ಕೆ ಭೇಟಿ ನೀಡಿದ ಯೂರೋಪ್ ಸಂಸದರ ನಿಯೋಗವನ್ನು ವಿಧಾನಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ಆತ್ಮೀಯವಾಗಿ ಬರಮಾಡಿಕೊಂಡರು.
ರಾಜ್ಯದಲ್ಲಿ ಮಕ್ಕಳು, ಮಹಿಳೆಯರು, ವಿಕಲಚೇತನರು, ಹಿರಿಯ ನಾಗರಿಕರು, ಸರಕಾರಿ ನೌಕರರು ಸೇರಿದಂತೆ ಇನ್ನಿತರರಿಗೆ ರಾಜ್ಯ ಸರಕಾರದ ವತಿಯಿಂದ ಕಲ್ಪಿಸಿ ಕೊಡಲಾಗುತ್ತಿರುವ ಆರೋಗ್ಯ ಸೇವೆಗಳ ಕುರಿತು ಅಧಿಕಾರಿಗಳು ಸಂಸದರ ನಿಯೋಗಕ್ಕೆ ಮಾಹಿತಿ ಒದಗಿಸಿದರು.
ವಿಕಲಚೇತನರಿಗೆ ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿ, ವಿದ್ಯಾರ್ಥಿ ವೇತನ, ಪಿಂಚಣಿ ಸೇರಿದಂತೆ ಇನ್ನಿತರ ಸೌಲಭ್ಯಗಳ ಬಗ್ಗೆಯೂ ಅಧಿಕಾರಿಗಳು ಸಂಸದರ ನಿಯೋಗಕ್ಕೆ ಮನವರಿಕೆ ಮಾಡಿಕೊಟ್ಟರು.
ಯೂರೋಪಿನ ಸಂಸದರ ನಿಯೋಗವು ಫೆ.6 ರಿಂದ 13ರವರೆಗೆ ಭಾರತದಲ್ಲಿ ಅಧ್ಯಯನ ಪ್ರವಾಸ ಕೈಗೊಂಡಿದ್ದು, ಈ ಸಂದರ್ಭದಲ್ಲಿ ಕುಟುಂಬ ಯೋಜನೆ, ಆರೋಗ್ಯ ಸೇವೆಗಳು, ಲಿಂಗ ಅಸಮಾನತೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಅಧ್ಯಯನ ನಡೆಸಲಿದೆ ಎಂದು ನಿಯೋಗದೊಂದಿಗೆ ಆಗಮಿಸಿದ್ದ ಎಫ್‌ಪಿಎ ಇಂಡಿಯಾ ಸಂಘಟನೆಯ ಪದಾಧಿಕಾರಿಗಳು ತಿಳಿಸಿದರು.





