ಜಾತಿ ರಾಜಕೀಯ ಮಾಡುತ್ತಿರುವ ಝಮೀರ್: ಡಿವಿಎಸ್
ಬೆಂಗಳೂರು, ಫೆ.11: ರಾಜಕಾರಣದಲ್ಲಿ ಜೆಡಿಎಸ್ ಶಾಸಕ ಝಮೀರ್‌ಅಹ್ಮದ್ ಖಾನ್ ಗಂಭೀರವಾಗಿರಬೇಕು. ಒಂದು ಸಮುದಾಯ ಅಥವಾ ಜಾತಿಯನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುವುದು ಬೇಡ ಎಂದು ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದಗೌಡ ಹೇಳಿದ್ದಾರೆ.
ಗುರುವಾರ ಹೆಬ್ಬಾಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗ್ಗೆ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ, ಮಧ್ಯಾಹ್ನ ಮಾಜಿ ಪ್ರಧಾನಿ ದೇವೇಗೌಡ ಹಾಗೂ ರಾತ್ರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ಝಮೀರ್‌ಅಹ್ಮದ್ ಕಾಲ ಕಳೆಯುತ್ತಾರೆ ಎಂದು ಟೀಕಿಸಿದರು. ನಾನು ಹಾಗೂ ಕುಮಾರಸ್ವಾಮಿ ಎರಡು ದೇಹ. ಆದರೆ, ಒಂದು ಜೀವ ಎಂದು ಹೇಳಿಕೊಂಡು ತಿರುಗುತ್ತಿದ್ದ ಅವರು, ರಾತ್ರಿಯಾಗುತ್ತಿದ್ದಂತೆ ಸಿದ್ದರಾಮಯ್ಯ ಮನೆಯಲ್ಲಿ ಊಟ ಮಾಡುತ್ತಾರೆ. ಝಮೀರ್‌ಅಹ್ಮದ್‌ಗೆ ಕೇವಲ ಮುಸ್ಲಿಮರ ಬೆಂಬಲ ಸಾಕೇ? ಹಾಗಿದ್ದರೆ, ಬಹಿರಂಗವಾಗಿಯೇ ಅದನ್ನು ಘೋಷಣೆ ಮಾಡಿ ಮುಸ್ಲೀಮ್ ಲೀಗ್‌ಗೆ ಸೇರ್ಪಡೆಯಾಗಲಿ ಎಂದು ಸದಾನಂದಗೌಡ ಸವಾಲು ಹಾಕಿದರು.
ಮುಖ್ಯಮಂತ್ರಿ ತಮ್ಮ ದುಬಾರಿ ಬೆಲೆಯ ಕೈಗಡಿಯಾರ ಹಾಗೂ ಕನ್ನಡಕವನ್ನು ಹರಾಜು ಹಾಕುವುದಾಗಿ ಹೇಳುತ್ತಿದ್ದಾರೆ. ಸ್ವತಃ ಮುಖ್ಯಮಂತ್ರಿಯೇ ಹರಾಜಿಗಿದ್ದಾರೆ. ಆದರೆ, ಅವರನ್ನು ಕೊಂಡೊಕೊಳ್ಳಲು ಅವರ ಮನೆಯವರೇ ಮುಂದೆ ಬರುವುದಿಲ್ಲ ಎಂದು ಅವರು ವ್ಯಂಗ್ಯವಾಡಿದರು.





