ಬಾಡಿಗೆ ಮನೆಗೆ ‘ಅಡ್ವಾನ್ಸ್’ ನೀಡಲು ಸ್ನೇಹಿತೆ ಮನೆಗೆ ನುಗ್ಗಿ ದರೋಡೆ
ಯುವತಿ ಸೇರಿ ಆರು ಮಂದಿ ಆರೋಪಿಗಳ ಸೆರೆ
ಬೆಂಗಳೂರು, ಫೆ. 11: ಬಾಡಿಗೆಗೆ ಮನೆ ಮಾಡಲು ಅಡ್ವಾನ್ಸ್ ಹಣಕ್ಕಾಗಿ ತನ್ನ ಸ್ನೇಹಿತೆಯ ಮನೆಗೆ ನುಗ್ಗಿ ಹಣ, ಆಭರಣ, ಮೊಬೈಲ್ ದರೋಡೆಗೈದ ಆರೋಪದ ಮೇಲೆ ಸುಬ್ರಹ್ಮಣ್ಯಪುರ ಠಾಣಾ ಪೊಲೀಸರು ಯುವತಿ ಸೇರಿದಂತೆ ಆರು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳನ್ನು ಲಗ್ಗೆರೆಯ ಆನಂದ್ (25), ಕೆಂಪೇಗೌಡ ನಗರದ ಪವನ್ ಕುಮಾರ್ ಎಂ. ಯಾನೆ ಪ್ರೇಮ್ (19), ಕಮಲಾನಗರದ ಎಂ.ಭರತ್ ಯಾನೆ ಮಾರಿ (18), ರೇವಣ್ಣ ಯಾನೆ ರೇವ (18), ಪೀಣ್ಯ ದಾಸರಹಳ್ಳಿಯ ನಿವಾಸಿ ಅಶ್ವಿನಿ (20) ಹಾಗೂ ಕುರುಬರಹಳ್ಳಿಯ ನಿವಾಸಿ ಚರಣ್ ಯಾನೆ ಮಾಣಿ (19) ಎಂದು ಗುರುತಿಸಲಾಗಿದೆ.
ಮೇಲ್ಕಂಡ ಆರೋಪಿಗಳು ಫೆ.2ರ ರಾತ್ರಿ 7:45ರ ಸುಮಾರಿಗೆ ದೊಡ್ಡಕಲ್ಲಸಂದ್ರ, ನಾರಾಯಣನಗರ, ಆರನೆ ಕ್ರಾಸ್‌ನಲ್ಲಿರುವ ರಾಜೇಶ್ವರಿ ಮನೆಗೆ ನುಗ್ಗಿ ಅವರ ಮುಖಕ್ಕೆ ಪೆಪ್ಪರ್ ಸ್ಪ್ರೇ ಮಾಡಿ ಚಾಕುವಿನಿಂದ ಬೆದರಿಸಿ ದರೋಡೆ ಕೃತ್ಯವನ್ನು ನಡೆಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಐದನೆ ಆರೋಪಿ ಅಶ್ವಿನಿ ಫಿರ್ಯಾದಿ ರಾಜೇಶ್ವರಿಯವರ ಸ್ನೇಹಿತೆಯಾಗಿದ್ದು, ಹೊಸ ಮನೆ ಮಾಡಲು ಅಡ್ವಾನ್ಸ್ ಹಣ ನೀಡಲು ಹಾಗೂ ಆರೋಪಿಗಳು ತಮ್ಮ ಮೋಜಿನ ಜೀವನಕ್ಕಾಗಿ ಮಾಡಿದ್ದ ಸಾಲವನ್ನು ತೀರಿಸಲು ದರೋಡೆ ಕೃತ್ಯ ನಡೆಸಿದ್ದಾರೆಂಬುದು ಪೊಲೀಸರ ವಿಚಾರಣೆಯಿಂದ ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ಆರೋಪಿಗಳಿಂದ ಸುಮಾರು 80 ಸಾವಿರ ರೂ.ಮೊತ್ತದ ಚಿನ್ನದ ಸರ, ಉಂಗುರಗಳು, ಡಾಲರ್, ಮೊಬೈಲ್‌ಫೋನ್ ಹಾಗೂ ಟಾಟಾ ಇಂಡಿಕಾ ಕಾರು ಸೇರಿದಂತೆ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಸುಬ್ರಹ್ಮಣ್ಯ ಪುರ ಠಾಣಾ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದು ತನಿಖೆ ಕೈಗೊಂಡಿದ್ದಾರೆ.





