ಇಶ್ರತ್ ಬಗ್ಗೆ ಹೆಡ್ಲಿ ಹೇಳಿಕೆ ನಂಬಬಹುದಾದರೆ , ಮೋದಿ ಬಗ್ಗೆ ಬಜರಂಗಿಯ ಹೇಳಿಕೆಯನ್ನು ಯಾಕೆ ನಂಬಬಾರದು ?

ಹೊಸದಿಲ್ಲಿ,ಫೆ.11: 2004ರಲ್ಲಿ ನಕಲಿ ಎನ್‌ಕೌಂಟರ್‌ನಲ್ಲಿ ಗುಜರಾತ್ ಪೊಲೀಸರ ಗುಂಡುಗಳಿಗೆ ಬಲಿಯಾದ ಇಷ್ರತ್ ಜಹಾನ್ ಲಷ್ಕರ್-ಎ-ತಯ್ಯಬಾದ ಆತ್ಮಾಹುತಿ ಬಾಂಬರ್ ಆಗಿದ್ದಳೆಂದು 26/11ರ ಮುಂಬೈ ಭಯೋತ್ಪಾದಕ ದಾಳಿಗಳ ರೂವಾರಿ ಡೇವಿಡ್ ಹೆಡ್ಲಿ ನೀಡಿರುವ ಹೇಳಿಕೆ ಈಗ ನಾವು ಓರ್ವ ಭಯೋತ್ಪಾದಕನ ಮಾತನ್ನು ನಂಬಬೇಕೇ ಎಂಬ ಬಗ್ಗೆ ಹೊಸ ಚರ್ಚೆಯನ್ನು ಹುಟ್ಟು ಹಾಕಿದೆ.
ಓರ್ವ ಭಯೋತ್ಪಾದಕನ ಸಾಕ್ಷವನ್ನು ಭಾರತವು ನಂಬಬಹುದಾದರೆ ಹೆಚ್ಚಿನವರು ಮುಸ್ಲಿಮರೇ ಸೇರಿದಂತೆ 1200 ಕ್ಕೂ ಅಧಿಕ ಜನರು ಹತ್ಯೆಯಾದ ನರಮೇಧದಲ್ಲಿ ನರೇಂದ್ರ ಮೋದಿಯವರ ಪಾತ್ರದ ಕುರಿತು ಗುಜರಾತ್ ಕೋಮು ಗಲಭೆಯ ದೋಷಿ ಬಾಬು ಬಜರಂಗಿ ಕ್ಯಾಮರಾದ ಮುಂದೆ ನೀಡಿರುವ ತಪ್ಪೊಪ್ಪಿಗೆಯನ್ನು ಅದು ಏಕೆ ನಂಬುತ್ತಿಲ್ಲ ಎಂದು ಹಲವರು ವಾದಿಸುತ್ತಿದ್ದಾರೆ.
ಈಗ ದಿಲ್ಲಿ ಸರಕಾರದೊಂದಿಗಿರುವ ಆಶಿಷ್ ಖೇತಾನ್ ಅವರು ತೆಹೆಲ್ಕಾ ಮ್ಯಾಗಝಿನ್‌ಗಾಗಿ ನಡೆಸಿದ್ದ ಕುಟುಕು ಕಾರ್ಯಾಚರಣೆಯಲ್ಲಿ ಆಗ ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದ ಈಗಿನ ಪ್ರಧಾನಿ ಮೋದಿಯವರು ದಂಗೆಕೋರರಿಗೆ ನೆರವಾಗಿದ್ದಷ್ಟೇ ಅಲ್ಲ, ನ್ಯಾಯಾಧೀಶರೋರ್ವರನ್ನು ತೆಗೆದು ಹಾಕುವ ಮೂಲಕ ತನಗೆ ನೆಮ್ಮದಿಯನ್ನು ನೀಡುವಲ್ಲಿ ಪ್ರಮುಖ ಪಾತ್ರವನ್ನೂ ವಹಿಸಿದ್ದರು ಎಂದು ಬಜರಂಗಿ ತಪ್ಪೊಪ್ಪಿಕೊಂಡಿದ್ದ.
ಬಜರಂಗಿ ಕ್ಯಾಮರಾದೆದುರು ತಪ್ಪೊಪ್ಪಿಕೊಂಡಿದ್ದ ವೀಡಿಯೊ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಮೋದಿ ಬೆತ್ತಲಾಗಿದ್ದಾರೆ! 2002ರ ಗುಜರಾತ್ ದಂಗೆಗಳಿಗೆ ನರೇಂದ್ರ ಮೋದಿಯವರೇ ಆದೇಶಿಸಿದ್ದರು ಎನ್ನುವುದಕ್ಕೆ ನಿರಾಕರಿಸಲು ಅಸಾಧ್ಯವಾದ ಸಾಕ್ಷಿಯಾಗಿದ್ದಾನೆ ಬಾಬು ಬಜರಂಗಿ. ತೆಹೆಲ್ಕಾದ ಕುಟುಕು ಕಾರ್ಯಾಚರಣೆಯಲ್ಲಿ ತನಿಖಾ ಪತ್ರಕರ್ತ ಆಶಿಷ್ ಖೇತಾನ್ ಜೀವದ ಹಂಗನ್ನೂ ತೊರೆದು ಹತ್ಯೆಗಳು ಮತ್ತು ಅತ್ಯಾಚಾರಗಳನ್ನು ನಡೆಸಿದ್ದ ಪಾತಕಿಗಳ ಸಂದರ್ಶನವನ್ನು ಮಾಡಿದ್ದಾರೆ;ಇದು ವಿಡಿಯೋದಲ್ಲಿರುವ ಬಣ್ಣನೆ.
ಭಾರತದಲ್ಲಿ ಹಿಂದುತ್ವದ ವೈಭವಪೂರ್ಣ ಪುನರುತ್ಥಾನದ ಬಗ್ಗೆ ತಾನೊಂದು ಪುಸ್ತಕವನ್ನು ಬರೆಯುತ್ತಿರುವುದಾಗಿ ಮತ್ತು ಅದನ್ನು ಸಾಧ್ಯವಾಗಿಸಿರುವ ಹಿರೋಗಳ ಸಂದರ್ಶನವನ್ನು ಮಾಡಲು ಬಯಸಿರುವುದಾಗಿ ಖೇತಾನ್ ಅವರನ್ನು ನಂಬಿಸಿದ್ದರು. ತಾವು ಕ್ಯಾಮರಾದಲ್ಲಿ ಸೆರೆಯಾಗುತ್ತಿರುವ ಅರಿವಿಲ್ಲದೆ ಈ ವ್ಯಕ್ತಿಗಳು ತಾವು ದಂಗೆಯ ಸಂಚನ್ನು ರೂಪಿಸಿ ಅದನ್ನು ಹೇಗೆ ಕಾರ್ಯಗತಗೊಳಿಸಿದ್ದೆವು, ಎಸಗಿದ್ದ ದೌರ್ಜನ್ಯಗಳನ್ನು ಹೇಗೆ ಮುಚ್ಚಿಟ್ಟಿದ್ದೆವು ಮತ್ತು ಅಷ್ಟೆಲ್ಲವನ್ನು ಮಾಡಿಯೂ ಕಾನೂನು ಕುಣಿಕೆಯಿಂದ ಪಾರಾಗಿದ್ದು ಹೇಗೆ ಎಂಬ ಬಗ್ಗೆ ಕೊಚ್ಚಿಕೊಂಡಿದ್ದರು. ಪ್ರತಿ ಹಂತದಲ್ಲಿಯೂ ನರೇಂದ್ರ ಮೋದಿ ತಮಗೆ ಹೇಗೆ ನೆರವಾಗಿದ್ದರು ಎನ್ನುವುದನ್ನೂ ಅವರು ವಿವರಿಸಿದ್ದರು.
ಇಷ್ಟೆಲ್ಲ ಹೇಳಿದ ಮೇಲೆ ಮತ್ತೆ ಅದೇ ಪ್ರಶ್ನೆ. ಹೆಡ್ಲಿಯಂತಹ ಭಯೋತ್ಪಾದಕನ ಮಾತನ್ನು ನಂಬುವ ಭಾರತ ಅದೇಕೆ ಬಾಬು ಬಜರಂಗಿ ಕ್ಯಾಮರಾದೆದುರು ನೀಡಿದ್ದ ತಪ್ಪೊಪ್ಪಿಗೆಯನ್ನು ಒಪ್ಪಿಕೊಳ್ಳುತ್ತಿಲ್ಲ?







