ತಳ ಸಮುದಾಯಗಳಲ್ಲಿ ವೀರಪ್ಪ ಮೊಯ್ಲಿಯವರು ಸ್ಫೂರ್ತಿ ತುಂಬಲಿ
ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಸಾಹಿತ್ಯ ಸಿಂಚನ ಸಂವಾದ ಕಾರ್ಯಕ್ರಮದಲ್ಲಿ ಪ್ರತಿಷ್ಠಿತ ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಡಾ.ಎಂ.ವೀರಪ್ಪ ಮೊಯಿಲಿಯವರು ಶೂದ್ರನಾಗಿ ಮತ್ತೊಮ್ಮ ಹುಟ್ಟಲಾರೆ’ ಎಂದು ನೋವು ತೋಡಿಕೊಂಡಿರುವುದಾಗಿ ವರದಿಯಾಗಿದೆ.
ಜಾತಿಯ ಅಪಮಾನ ಮತ್ತು ಬಡತನದ ಸಂಕಟಗಳನ್ನು ಮೆಟ್ಟಿ ನಿಂತು ಸಾಹಿತ್ಯ, ರಾಜಕಾರಣ ಹಾಗೂ ಸಮಾಜಿಕ ಕ್ಷೇತ್ರಗಳಲ್ಲಿ ಗೌರವಾಧಾರ ಹಾಗೂ ಪ್ರಶಸ್ತಿ ಪುರಸ್ಕಾರಗಳನ್ನುಗಳಿಸಿ ಶೂದ್ರ ಸಮುದಾಯಕ್ಕೆ ಘನತೆಯನ್ನು ತಂದುಕೊಟ್ಟಿರುವ ಶ್ರೀಯುತರು ಶೂದ್ರರಾಗಿ ಹುಟ್ಟಿದ್ದಕ್ಕೆ ನೋವು ತೋಡಿಕೊಳ್ಳದೆ ಹೆಮ್ಮೆ ಪಡುವುದೇ ಔಚಿತ್ಯವೆನಿಸುತ್ತದೆ.
ಪ್ರತಿಭೆ ಮತ್ತು ದಕ್ಷತೆ ಯಾವುದೇ ಒಂದು ಜಾತಿಯ ಸ್ವತ್ತಲ್ಲ ಎಂಬುದನ್ನು ನಿರೂಪಿಸುತ್ತಲೇ ಶೂದ್ರರಾಗಿ ಹುಟ್ಟಿದರೂ ವಕೀಲರಾಗಿ, ಕೇಂದ್ರ ಸಚಿವರಾಗಿ ಈ ರಾಜ್ಯದ ಮುಖ್ಯಮಂತ್ರಿ ಪದವಿಗೇರಿ ಸಾಹಿತ್ಯ ಕೃಷಿಯಲ್ಲಿ ಜನಮನ್ನಣೆಗಳಿಸಿರುವ ಡಾ.ಮೊಯ್ಲಿಐವರು ಜಾತಿಯ ಅಪಮಾನಕ್ಕೀಡಾದ ತಳ ಸಮುದಾಯಗಳ ಎದೆಗಳಲ್ಲಿ ಕೀಲರಿಮೆಯನ್ನು ಕಿತ್ತಸೆದು ಆತ್ಮಾಭಿಮಾನ ಜಾಗೃತಗೊಳಿಸಿ ಮುನ್ನುಗ್ಗುವಂತಹ ಸ್ಫೂರ್ತಿ ಚೈತನ್ಯದ ಬೀಜವನ್ನು ಬಿತ್ತಬೇಕಿದೆ. ವಿಮರ್ಶಕರಾದ ಡಾ.ಸಿ.ಎನ್.ರಾಮಚಂದ್ರನ್‌ರವರು ಹೇಳಿರುವಂತೆ ‘ನಿರ್ಲಕ್ಷಿತ ಸಮುದಾಯದ ಧ್ವನಿ’ಯಾಗಿರುವ ಡಾ.ಮೊಯ್ಲಿಯವರು ಶೂದ್ರರಲ್ಲದೆ ನೋವು ಸಂಕಟಗಳನ್ನೆಲ್ಲ ಹೊಸಕಿ ಹೊಸ ತಲೆಮಾರಿನ ಯಾವ ಸಮುದಾಯಕ್ಕೆ ಸ್ಫೂರ್ತಿಯ ಸಂಕೇತವಾಗಲೆಂದು ಆಶಿಸುವೆ.





