‘ಸಿಯಾಚಿನ್ ವಿವಾದ ಬಗೆಹರಿಸಲು ಸಕಾಲ’
ಹೊಸದಿಲ್ಲಿ, ಫೆ. 11: ಸಿಯಾಚಿನ್ ವಿವಾದವನ್ನು ಬಗೆಹರಿಸಿಕೊಳ್ಳಲು ಭಾರತ ಮತ್ತು ಪಾಕಿಸ್ತಾನಗಳಿಗೆ ಇದು ಸಕಾಲ ಎಂದು ಭಾರತಕ್ಕೆ ಪಾಕಿಸ್ತಾನದ ಹೈಕಮಿಶನರ್ ಅಬ್ದುಲ್ ಬಾಸಿತ್ ಗುರುವಾರ ಹೇಳಿದ್ದಾರೆ.
ಲ್ಯಾನ್ಸ್ ನಾಯಕ್ ಹನುಮಂತಪ್ಪ ಕೊಪ್ಪದ ಸಿಯಾಚಿನ್‌ನ ಹಿಮ ಕಣಿವೆಯಲ್ಲಿ ಆರು ದಿನಗಳ ಕಾಲ ಜೀವ ಹಿಡಿದುಕೊಂಡಿದ್ದು, ಇಂದು ಇಲ್ಲಿನ ಸೇನಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ವಿವಾದವನ್ನು ಶಾಂತಿಯುತವಾಗಿ ಮಾತುಕತೆಯ ಮೂಲಕ ಬಗೆಹರಿಸಬೇಕು ಎನ್ನುವುದಕ್ಕೆ ಇಂಥ ದುರಂತಗಳು ಒತ್ತು ನೀಡುತ್ತವೆ. ಕಳೆದ ವರ್ಷ ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನದಲ್ಲಿ ನಮ್ಮ ಪ್ರಧಾನಿ ಮಾಡಿದ ಭಾಷಣವನ್ನು ಇಲ್ಲಿ ಸ್ಮರಿಸಬಹುದಾಗಿದೆ. ಭಾರತ ಮತ್ತು ಪಾಕಿಸ್ತಾನಗಳೆರಡೂ ಸಿಯಾಚಿನ್‌ನಿಂದ ಸೈನಿಕರನ್ನು ಹಿಂದಕ್ಕೆ ಕರೆಸಿಕೊಳ್ಳಬೇಕು ಎನ್ನುವ ಪ್ರಸ್ತಾಪವನ್ನು ಅವರು ಮುಂದಿಟ್ಟಿದ್ದರು. ಹಾಗಾಗಿ, ಸಿಯಾಚಿನ್‌ನ ಕಠಿಣ ಹವಾಮಾನದಲ್ಲಿ ಇನ್ನಷ್ಟು ಜೀವಗಳು ಸಾಯದಂತೆ ನೋಡಿಕೊಳ್ಳುವ ಸಮಯ ಬಂದಿದೆ ಎಂದು ನಾವು ಭಾವಿಸುತ್ತೇವೆ ಎಂದರು.





