ನಾಳೆಯಿಂದ ‘ಪ್ರವಾಸಿ ಜಾನಪದ ಲೋಕೋತ್ಸವ’
ಬೆಂಗಳೂರು, ಫೆ.11: ಕರ್ನಾಟಕ ಜಾನಪದ ಪರಿಷತ್, ರಾಜ್ಯ ಪ್ರವಾಸೋದ್ಯಮ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಫೆ.13 ಹಾಗೂ 14ರಂದು ‘ಪ್ರವಾಸಿ ಜಾನಪದ ಲೋಕೋತ್ಸವ-2016’ ಕಾರ್ಯಕ್ರಮವನ್ನು ರಾಮನಗರ ಜಿಲ್ಲೆಯ ಜಾನಪದ ಲೋಕದಲ್ಲಿ ಆಯೋಜಿಸಲಾಗಿದೆ ಎಂದು ಕರ್ನಾಟಕ ಜಾನಪದ ಪರಿಷತ್‌ನ ಅಧ್ಯಕ್ಷ ಟಿ.ತಿಮ್ಮೇಗೌಡ ತಿಳಿಸಿದ್ದಾರೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಎಲ್.ಹನುಮಂತಯ್ಯ ಪ್ರವಾಸಿ ಜಾನಪದ ಲೋಕೋತ್ಸವವನ್ನು ಉದ್ಘಾಟಿಸಲಿದ್ದಾರೆ. ಈ ವೇಳೆ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಬೆಳಗಲ್ಲು ವೀರಣ್ಣ, ಜಾನಪದ ಗಾಯಕ ಟಿ.ಕೆಂಪಹನುಮಯ್ಯ, ಅಪ್ಪಗೆರೆ ತಿಮ್ಮರಾಜು ಅವರನ್ನು ಸನ್ಮಾನಿಸಲಾಗುತ್ತದೆ ಎಂದು ತಿಳಿಸಿದರು.
ಫೆ.14ರಂದು ನಡೆಯುವ ಕಾರ್ಯಕ್ರಮದಲ್ಲಿ ಕವಿ ಪ್ರೊ.ಸಿದ್ದಲಿಂಗಯ್ಯರವರಿಗೆ ‘ಜಾನಪದ ಲೋಕಶ್ರೀ’ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು. ಹಾಗೆಯೆ ರಾಜ್ಯದ ವಿವಿಧ ಪ್ರಕಾರದ ಜನಪದ ಕಲಾವಿದರಿಗೆ ಲಕ್ಷ್ಮಮ್ಮ ನಾಗೇಗೌಡ ಪ್ರಶಸ್ತಿ, ಸೋಬಾನೆ ಚಿಕ್ಕಮ್ಮ ಪ್ರಶಸ್ತಿ, ದೊಡ್ಡಮನೆ ಹಾಗೂ ದೊಡ್ಡಮನೆ ಲಿಂಗೇಗೌಡ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ ಎಂದು ತಿಳಿಸಿದರು.