ಯೋಧ ಹನುಮಂತಪ್ಪ ಹುತಾತ್ಮ

ಹುಟ್ಟೂರಿನಲ್ಲಿ ಇಂದು ಯೋಧನ ಅಂತ್ಯಸಂಸ್ಕಾರ
ಹೊಸದಿಲ್ಲಿ, ಫೆ.11: ಸಿಯಾಚಿನ್ ಗ್ಲೇಸಿಯರ್‌ನಲ್ಲಿ ಇತ್ತೀಚೆಗೆ ಸಂಭವಿಸಿದ ಭಾರೀ ಹಿಮಪಾತದಲ್ಲಿ ಪವಾಡ ಸದೃಶವಾಗಿ ಬದುಕಿದ್ದ ಕರ್ನಾಟಕದ ವೀರ ಯೋಧ ಲಾನ್ಸ್ ನಾಯಕ್ ಹನುಮಂತಪ್ಪ ಕೊಪ್ಪದ, ನಾಲ್ಕು ದಿನಗಳ ಕಾಲ ಸಾವು-ಬದುಕಿನ ಹೋರಾಟ ನಡೆಸಿ ಇಂದು ಮುಂಜಾನೆ ದಿಲ್ಲಿಯ ಸೇನಾಸ್ಪತ್ರೆಯಲ್ಲಿ ಹುತಾತ್ಮರಾಗಿದ್ದಾರೆ.
ಅವರು ಆಳವಾದ ಕೋಮಾಕ್ಕೆ ಜಾರಿದ್ದಾರೆ ಹಾಗೂ ಬಹು ಅಂಗಾಂಗ ವೈಫಲ್ಯ ಅನುಭವಿಸಿದ್ದಾರೆಂದು ಈ ಮೊದಲು ವೈದ್ಯಕೀಯ ವರದಿ ಹೇಳಿತ್ತು. ಕೊಪ್ಪದರನ್ನು ರಕ್ಷಿಸಿದ ವೇಳೆ ಅವರು ಪ್ರಜ್ಞಾಹೀನರಾಗಿದ್ದರು. ಅವರ ಪ್ರಾಣ ಉಳಿಸಲು ಸೇನಾ ವೈದ್ಯರೊಂದಿಗೆ ಎಐಎಂಎಸ್‌ನ ತಜ್ಞ ವೈದ್ಯರ ತಂಡವೊಂದು ಕೈಜೋಡಿಸಿತ್ತಾದರೂ ಯೋಧನ ಸ್ಥಿತಿ ಹದಗೆಡುತ್ತಲೇ ಸಾಗಿತೆಂದು ಆರ್ಮಿ ರೀಸರ್ಚ್ ಆ್ಯಂಡ್ ರೆಫರಲ್ ಆಸ್ಪತ್ರೆ ತಿಳಿಸಿತ್ತು.
ಹನುಮಂತಪ್ಪನವರಿಗೆ ತುರ್ತು ಚಿಕಿತ್ಸಕರು, ನರ ತಜ್ಞರು, ಮೂತ್ರ ರೋಗ ತಜ್ಞರು, ಗ್ರಂಥಿ ರೋಗ ತಜ್ಞರು ಹಾಗೂ ಚಿಕಿತ್ಸಕರ ತಂಡ ಚಿಕಿತ್ಸೆ ನೀಡಿತ್ತು.
ಅವರ ರಕ್ತದೊತ್ತಡವನ್ನು ಹೆಚ್ಚಿಸಲು ದ್ರವಗಳು ಹಾಗೂ ಔಷಧಗಳನ್ನು ಹಾಗೂ ಆ್ಯಂಟಿ ಬಯೋಟಿಕ್‌ಗಳನ್ನು ನೀಡುತ್ತಿದ್ದೇವೆ. ಆದಾಗ್ಯೂ, ಅವರ ದೇಹಸ್ಥಿತಿ ತೀರಾ ಹದಗೆಟ್ಟಿದೆ. ಅವರ ಮೆದುಳಿಗೆ ಆಮ್ಲಜನಕ ಪೂರೈಕೆಯಾಗುತ್ತಿಲ್ಲವೆಂಬುದು ಸಿಟಿ ಸ್ಕಾನ್‌ನಿಂದ ತಿಳಿದು ಬಂದಿದೆಯೆಂದು ಬುಧವಾರ ಸಂಜೆ 4 ಗಂಟೆಗೆ ಹೊರಡಿಸಲಾಗಿದ್ದ ಮೆಡಿಕಲ್ ಬುಲೆಟಿನ್ ಹೇಳಿತ್ತು.
ಹನುಮಂತಪ್ಪನವರ ಎರಡೂ ಶ್ವಾಸಕೋಶಗಳಿಗೆ ನ್ಯೂಮೇನಿಯಾ ಸೋಂಕು ತಗಲಿದೆ. ಬಹು ಅಂಗಾಂಗ ವೈಫಲ್ಯ ಮುಂದುವರಿದಿದೆ. ಎಡೆಬಿಡದ ಚಿಕಿತ್ಸೆ ಹಾಗೂ ಜೀವರಕ್ಷಕ ವ್ಯವಸ್ಥೆಯ ಹೊರತಾಗಿಯೂ ಅವರ ದೇಹಸ್ಥಿತಿ ಮತ್ತಷ್ಟು ವಿಷಮಿಸುತ್ತಲೇ ಸಾಗಿದೆಯೆಂದು ಅದು ತಿಳಿಸಿತ್ತು.
33ರ ಹರೆಯದ ಹನುಮಂತಪ್ಪ ತಾಯಿ, ಪತ್ನಿ ಜಯಶ್ರೀ ಹಾಗೂ 2ರ ಹರೆಯದ ಪುತ್ರಿಯನ್ನು ಅಗಲಿದ್ದಾರೆ.
ದಿಲ್ಲಿಯಲ್ಲಿ ಅಂತಿಮ ನಮನ
ಹೊಸದಿಲ್ಲಿ, ಫೆ.11: ಸಿಯಾಚಿನ್ ಗ್ಲೇಸಿಯರ್‌ನಲ್ಲಿ ಹಿಮರಾಶಿಯಲ್ಲಿ ಸಮಾಧಿಯಾಗಿ ಆರುದಿನಗಳ ಕಾಲ ಬದುಕುಳಿದು ಮಂಗಳವಾರ ದಿಲ್ಲಿಯ ಸೇನಾಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಲಾನ್ಸ್ ನಾಯಕ್ ಹನುಮಂತಪ್ಪ ಕೊಪ್ಪದ ಅವರ ಪಾರ್ಥಿವ ಶರೀರಕ್ಕೆ ರಾಜಧಾನಿಯ ಬ್ರಾರ್ ಸ್ಕ್ವಾರ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪುಷ್ಪಗುಚ್ಛಗಳನ್ನಿರಿಸಿ ಸೇನಾಗೌರವ ಸಲ್ಲಿಸಲಾಯಿತು.
ರಾಷ್ಟ್ರಧ್ವಜವನ್ನು ಹೊದಿಸಲಾದ ಕನ್ನಡಿಗ ಯೋಧನ ಪಾರ್ಥಿವ ಶರೀರಕ್ಕೆ ರಕ್ಷಣಾ ಸಚಿವ ಮನೋಹರ ಪಾರಿಕ್ಕರ್ ಹಾಗೂ ಮೂರು ರಕ್ಷಣಾ ಪಡೆಗಳ ಮುಖ್ಯಸ್ಥರು ಅಂತಿಮ ನಮನ ಸಲ್ಲಿಸಿದರು. ಲಾನ್ಸ್ ನಾಯಕ್ ಹನುಮಂತಪ್ಪ ಕೊಪ್ಪದ ಕುಟುಂಬದ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್‌ಗಾಂಧಿ, ಅರವಿಂದ್ ಕೇಜ್ರಿವಾಲ್ ಸೇರಿದಂತೆ ಪ್ರಮುಖ ನಾಯಕರು ಕೂಡಾ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.
.................
ಹುಟ್ಟೂರಿನಲ್ಲಿ ಇಂದು ಯೋಧನ ಅಂತ್ಯಸಂಸ್ಕಾರ
ಹುಬ್ಬಳ್ಳಿ ನೆಹರೂ ಮೈದಾನದಲ್ಲಿ ಸಾರ್ವಜನಿಕ ದರ್ಶನ ಅಂತ್ಯ ಸಂಸ್ಕಾರದಲ್ಲಿ ಸಿದ್ದರಾಮಯ್ಯ, ಸಚಿವರು ಭಾಗಿ ಸಕಲ ಸರಕಾರಿ ಗೌರವ
ಬೆಂಗಳೂರು, ಫೆ.11: ದಿಲ್ಲಿಯ ಮಿಲಿಟರಿ ಆರ್‌ಆರ್ ಆಸ್ಪತ್ರೆಯಲ್ಲಿ ಗುರುವಾರ ಬೆಳಗ್ಗೆ 11:45ರ ಸುಮಾರಿಗೆ ವೀರಮರಣವನ್ನಪ್ಪಿದ ಧಾರವಾಡ ಜಿಲ್ಲೆ, ಕುಂದಗೋಳ ತಾಲೂಕಿನ ಬೆಟದೂರಿನ ಲಾನ್ಸ್ ನಾಯಕ್ ಹನುಮಂತಪ್ಪ ಕೊಪ್ಪದ ಅವರ ಪಾರ್ಥಿವ ಶರೀರವನ್ನು ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾತ್ರಿ ಬರಮಾಡಿಕೊಂಡರು.
ಹನುಮಂತಪ್ಪಕೊಪ್ಪದ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು, ಅವರ ಪಾರ್ಥಿವ ಶರೀರಕ್ಕೆ ಪುಷ್ಪ ನಮನ ಸಲ್ಲಿಸಿ ರಾಜ್ಯದ ಜನತೆಯ ಪರವಾಗಿ ಗೌರವ ಅರ್ಪಿಸಿದ ಸಿದ್ದರಾಮಯ್ಯ, ಇದೇ ವೇಳೆ ವೀರಯೋಧ ಕೊಪ್ಪದ ಅವರ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ.ಪಾಟೀಲ್ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಹಾಗೂ ಗಣಿ ಮತ್ತು ಭೂ ವಿಜ್ಞಾನ ಸಚಿವ ವಿನಯ್ ಕುಲಕರ್ಣಿ, ಜಿಲ್ಲಾಧಿಕಾರಿ ರಾಜೇಂದ್ರ ಚೋಳನ್, ಪೊಲೀಸ್ ಆಯುಕ್ತ ಸೇರಿದಂತೆ ಹಲವು ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸಾರ್ವಜನಿಕರ ದರ್ಶನಕ್ಕೆ: ರಾತ್ರಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ವೀರ ಯೋಧನ ಪಾರ್ಥಿವ ಶರೀರವನ್ನು ಇರಿಸಲಾಗಿದ್ದು, ಫೆ.12ರ ಬೆಳಗ್ಗೆ 7ರಿಂದ 10ಗಂಟೆ ವರೆಗೆ ಸಾರ್ವಜನಿಕರ ದರ್ಶನಕ್ಕೆ ಇಲ್ಲಿನ ನೆಹರೂ ಮೈದಾನದಲ್ಲಿ ಇರಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿನಯ್ ಕುಲಕರ್ಣಿ ತಿಳಿಸಿದ್ದಾರೆ.
ಗುರುವಾರ ರಾತ್ರಿ ಹುಬ್ಬಳ್ಳಿಯ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಶುಕ್ರವಾರ ಮಧ್ಯಾಹ್ನ 12:30ರ ಸುಮಾರಿಗೆ ಕೊಪ್ಪದ ಅವರ ಹುಟ್ಟೂರು ಬೆಟದೂರಿನಲ್ಲಿ ಸಕಲ ಸರಕಾರಿ ಹಾಗೂ ಮಿಲಿಟರಿ ಗೌರವಗಳೊಂದಿಗೆ ಲ್ಯಾನ್ಸ್ ನಾಯಕ್ ಕೊಪ್ಪದ ಅಂತ್ಯಸಂಸ್ಕಾರ ನರವೇರಿಸಲಾಗುವುದು ಎಂದರು.
ಕೊಪ್ಪದ ಅಂತ್ಯ ಸಂಸ್ಕಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಂಪುಟ ಸಚಿವರು, ಜಿಲ್ಲೆಯ ಶಾಸಕರು, ಮುಖಂಡರು, ಹಿರಿಯ ಅಧಿಕಾರಿಗಳು, ಸಾರ್ವಜನಿಕರು, ಗ್ರಾಮಸ್ಥರು ಹಾಗೂ ಕೊಪ್ಪದ ಅವರ ಕುಟುಂಬದ ಸದಸ್ಯರು ಪಾಲ್ಗೊಳ್ಳಲಿದ್ದಾರೆಂದು ವಿನಯ್ ಕುಲಕಣಿ ತಿಳಿಸಿದರು.







