ವೇದ , ಉಪನಿಷತ್ತುಗಳು ಮಾಡದ ಭೇದ ಭಾವ ಶಬರಿಮಲೆಯಲ್ಲಿ ಮಾತ್ರ ಏಕೆ ?

ಹೊಸದಿಲ್ಲಿ , ಫೆ. 12 : ಹಿಂದೂ ಧರ್ಮಗ್ರಂಥಗಳಾದ ವೇದಗಳು ಹಾಗು ಉಪನಿಷತ್ತುಗಳೇ ಪುರುಷರು ಹಾಗು ಮಹಿಳೆಯರ ನಡುವೆ ಬೇಧ ಭಾವ ಮಾಡುವುದಿಲ್ಲ ಎಂದಿರುವ ಸುಪ್ರೀಂ ಕೋರ್ಟ್ ಕೇರಳದ ಶಬರಿಮಲೆ ದೇವಳದಲ್ಲಿ ಮಹಿಳೆಯರಿಗೆ ನಿಷೇಧ ಹೇರಿರುವುದನ್ನು ಪ್ರಶ್ನಿಸಿದೆ.
" ವೇದಗಳು ಹಾಗು ಉಪನಿಷತ್ತುಗಳಲ್ಲಿ ಗಂಡು ಹೆಣ್ಣಿನ ನಡುವೆ ಭೇದವಿಲ್ಲ. ಇದು ಇತ್ತೀಚಿಗೆ ಇತಿಹಾಸದಲ್ಲಿ ಸೇರಿಕೊಂಡಿದೆ " ಎಂದು ಶಬರಿಮಲೆಯಲ್ಲಿ 10 ರಿಂದ 50 ವರ್ಷದ ಮಹಿಳೆಯರಿಗೆ ನಿಷೇಧ ಹೇರಿರುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಹೇಳಿದೆ.
"ನಾವು ಸಂಕುಚಿತ ಅಭಿಪ್ರಾಯ ಹೇಳುತ್ತಿಲ್ಲ. ನಾವು ಸಮಾನತೆ ಹಾಗು ಧಾರ್ಮಿಕ ಆಚರಣೆಯ ಹಕ್ಕಿನ ನಡುವೆ ಸಂವಿಧಾನಾತ್ಮಕ ಸಂತುಲನೆ ಕಾಯ್ದುಕೊಳ್ಳಲು ಬಯಸುತ್ತೇವೆ. ದೇವಸ್ಥಾನ ಒಂದು ಧಾರ್ಮಿಕ ವಿಷಯವಾಗಿದ್ದು ಅದರ ಕಾರ್ಯಕ್ರಮಗಳು ಒಂದು ಮಾನದಂಡದ ಪ್ರಕಾರ ಇರಬೇಕು " ಎಂದು ನ್ಯಾಯಾಲಯ ಹೇಳಿದೆ.
ಈ ಸಂಪ್ರದಾಯ ಸಾವಿರ ವರ್ಷಗಳಿಂದ ಇದ್ದು ಈಗ ಏಕೆ ಇದನ್ನು ಕೆದಕಲಾಗುತ್ತಿದೆ ಎಂದು ದೇವಸ್ಥಾನದ ವಕೀಲ ಕೆ ಕೆ ವೇಣುಗೋಪಾಲ್ ಹೇಳಿದ್ದಕ್ಕೆ ಈ ಸಂಪ್ರದಾಯ ಪ್ರಾರಂಭವಾದ ನಿಖರ ದಿನಾಂಕ ಹಾಗು ಅದಕ್ಕಿರುವ ಐತಿಹಾಸಿಕ ಕಾರಣಗಳನ್ನು ನೀಡುವಂತೆ ದೇವಸ್ಥಾನ ಹಾಗು ಕೇರಳ ಸರಕಾರಕ್ಕೆ ನ್ಯಾಯಾಲಯ ಹೇಳಿದೆ.
ಈ ಬೇಧ ಭಾವವನ್ನು ಸಮಾನತೆ ಹಾಗು ಧಾರ್ಮಿಕ ಆಚರಣೆಗಳ ಹಕ್ಕಿನ ಸಾಂವಿಧಾನಿಕ ಮಾನದಂಡಗಳ ಆಧಾರದಲ್ಲಿ ಪರೀಕ್ಷಿಸಲಾಗುವುದು ಎಂದು ಅದು ಹೇಳಿದೆ. ದೇವಸ್ಥಾನಕ್ಕೆ ಉತ್ತರಿಸಲು ಆರು ವಾರಗಳ ಕಾಲಾವಕಾಶ ನೀಡಲಾಗಿದೆ.
.







