ಪ್ರೊ . ಎಸ್.ಎ.ಆರ್ ಗೀಲಾನಿ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲು

ಹೊಸದಿಲ್ಲಿ , ಫೆ. 12 : ಅಫ಼್ಝಲ್ ಗುರುಗೆ ಗಲ್ಲಿನ ವಿರುದ್ಧ ದೆಹಲಿಯ ಪ್ರೆಸ್ ಕ್ಲಬ್ ನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ದೇಶ ವಿರೋಧಿ ಘೋಷಣೆ ಕೂಗಿದ್ದಾರೆ ಎನ್ನಲಾದ ಪ್ರಕರಣದಲ್ಲಿ ಪೊಲೀಸರು ದೇಶದ್ರೋಹದ ಪ್ರಕರಣ ದಾಖಲಿಸಿದ್ದಾರೆ.
ಎಫ್ ಐ ಆರ್ ನಲ್ಲಿ ೧೩ ವರ್ಷಗಳ ಹಿಂದೆ ಸಂಸತ್ತಿನ ಮೇಲಿನ ದಾಳಿ ಪ್ರಕರಣದಲ್ಲಿ ದೋಷಮುಕ್ತರಾಗಿದ್ದ ದಿಲ್ಲಿ ವಿವಿಯ ಪ್ರೊ. ಎಸ ಎ ಆರ್ ಗೀಲಾನಿ ಅವರನ್ನು ಹೆಸರಿಸಲಾಗಿದೆ. ಅವರನ್ನು ವಿಚಾರಣೆಗೆ ಕರೆದಿದ್ದು ಅಪರಾಧ ಎಸಗಿದ್ದು ಕಂಡು ಬಂದರೆ ಅವರನ್ನು ಬಂಧಿಸಲಾಗುವುದು ಎಂದು ಡಿಸಿಪಿ ಜತಿನ್ ನರ್ವಾಲ್ ಹೇಳಿದ್ದಾರೆ.
" ದೇಶ ವಿರೋಧಿ ಘೋಷಣೆ ಕೂಗುವವರು ಹಾಗು ದೇಶದ ಏಕತೆಯ ಬಗ್ಗೆ ಪ್ರಶ್ನಿಸುವವರನ್ನು ಬಿಡುವ ಪ್ರಶ್ನೆಯೇ ಇಲ್ಲ " ಎಂದು ಗೃಹ ಸಚಿವ ರಾಜ್ ನಾಥ್ ಸಿಂಗ್ ಹೇಳಿದ ಬೆನ್ನಿಗೇ ಈ ಘಟನೆ ನಡೆದಿದೆ.
ಸಂಸತ್ತಿನ ಮೇಲಿನ ದಾಳಿ ಪ್ರಕರಣದ ಅಪರಾಧಿ ಅಫ಼್ಝಲ್ ಗುರು ಗಲ್ಲಿನ ವಿರುದ್ಧ ಜವಾಹರ್ ಲಾಲ್ ನೆಹರೂ ವಿವಿಯಲ್ಲಿ ನಡೆಸಲಾದ ಪ್ರತಿಭಟನೆಯಲ್ಲಿ ದೇಶ ವಿರೋಧಿ ಘೋಷಣೆ ಕೂಗಿದ್ದಾರೆ ಎಂದು ಹೇಳಲಾಗಿದ್ದು ಇದರ ವಿರುದ್ಧ ಗುರುವಾರ ಪೊಲೀಸರು ದೇಶದ್ರೋಹ ಹಾಗು ಕ್ರಿಮಿನಲ್ ಸಂಚಿನ ದೂರು ದಾಖಲಿಸಿಕೊಂಡಿದ್ದಾರೆ.
ಬಿಜೆಪಿಯ ವಿದ್ಯಾರ್ಥಿ ಘಟಕ ಎಬಿವಿಪಿ ಕಾರ್ಯಕ್ರಮ ಆಯೋಜಕರ ವಿರುದ್ಧ ದೂರು ನೀಡಿತ್ತು. ಇದು ವಿವಿಯ ಆದೇಶದ ವಿರುದ್ಧ ನಡೆದ ಕಾರ್ಯಕ್ರಮ ಎಂದು ವಿವಿಯ ಕುಲಪತಿ ಹೇಳಿದ್ದಾರೆ. ಕಾರ್ಯಕ್ರಮವನ್ನು ಎಡಪಂಥೀಯ ಸಂಘಟನೆಯೊಂದು ನಡೆಸಿತ್ತು .







