ಸುಳ್ಯ : 40 ಅಭ್ಯರ್ಥಿಗಳ ರಾಜಕೀಯ ಭವಿಷ್ಯ 20ರಂದು ನಿರ್ಧಾರ
ಸುಳ್ಯ: ಸುಳ್ಯ ತಾಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಯ ಅಂತಿಮ ಕಣ ಸ್ಪಷ್ಟವಾಗಿದ್ದು, 40 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಫೆಬ್ರವರಿ 20ರಂದು ನಿರ್ಧಾರವಾಗಲಿದೆ.
ಸುಳ್ಯ ತಾಲೂಕಿನ 13 ತಾಲೂಕು ಪಂಚಾಯತ್ ಕ್ಷೇತ್ರಗಳಿಗೆ 30 ಅಭ್ಯರ್ಥಿಗಳು ಹಾಗೂ ನಾಲ್ಕು ಜಿಲ್ಲಾ ಪಂಚಾಯತ್ ಕ್ಷೇತ್ರಗಳಿಗೆ 10 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬಹುತೇಕ ಕಡೆ ನೇರ ಸ್ಪರ್ಧೆ ನಡೆಯಲಿದೆ. ಬೆಳ್ಳಾರೆ ಜಿ.ಪಂ. ಕ್ಷೇತ್ರದಲ್ಲಿ ಬಿಜೆಪಿಯ ಎಸ್.ಎನ್.ಮನ್ಮಥ ಮತ್ತು ಕಾಂಗ್ರೆಸ್‌ನ ರಾಜೀವಿ ರೈ ಮುಖಾಮುಖಿಯಾಗುತ್ತಿದ್ದಾರೆ. ಗುತ್ತಿಗಾರು ಜಿ.ಪಂ. ಕ್ಷೇತ್ರದಲ್ಲಿ ಬಿಜೆಪಿಯ ಆಶಾ ತಿಮ್ಮಪ್ಪ ಹಾಗೂ ಕಾಂಗ್ರೆಸ್‌ನ ವಿಮಲಾ ರಂಗಯ್ಯ, ಜಾಲ್ಸೂರು ಜಿ.ಪಂ. ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಸರಸ್ವತಿ ಕಾಮತ್ ಮತ್ತು ಬಿಜೆಪಿಯ ಪುಷ್ಪಾವತಿ ಬಾಳಿಲ ಅಂತಿಮ ಕಣದಲ್ಲಿದ್ದಾರೆ. ಅರಂತೋಡು ಜಿ.ಪಂ. ಕ್ಷೇತ್ರದಲ್ಲಿ ನಾಲ್ವರು ಅಭ್ಯರ್ಥಿಗಳು ಕಣದಲ್ಲಿದ್ದು, ಬಿಜೆಪಿಯ ಹರೀಶ್ ಕಂಜಿಪಿಲಿ, ಕಾಂಗ್ರೆಸ್‌ನ ಎಂ.ಮಾಧವ ಗೌಡ, ಜೆಡಿಎಸ್‌ನ ರಾಮಚಂದ್ರ ಬಳ್ಳಡ್ಕ ಮತ್ತು ಪಕ್ಷೇತರ ಅಭ್ಯರ್ಥಿ ಅನಿಲ್ ಬಳ್ಳಡ್ಕ ಅಂತಿಮ ಸ್ಪರ್ಧೆ ಎದುರು ನೋಡುತ್ತಿದ್ದಾರೆ. ತಾಲೂಕು ಕ್ಷೇತ್ರಗಳ ಪೈಕಿ ಬೆಳ್ಳಾರೆಯಲ್ಲಿ ಕಾಂಗ್ರೆಸಿನ ನಳಿನಾಕ್ಷಿ ನಾರಾಯಣ, ಶಾರದಾ ಎಸ್.ಕೆ.ದರ್ಖಾಸ್ತು , ಪಕ್ಷೇತರ ಲಲಿತಾ ಆನಂದ ಕಣದಲ್ಲಿದ್ದಾರೆ. ಎಣ್ಮೂರು ಕ್ಷೇತ್ರದಲ್ಲಿ ಬಿಜೆಪಿಯ ಶುಭದಾ ಎಸ್. ರೈ ಮತ್ತು ಕಾಂಗ್ರೆಸಿನ ವನಿತಾಕುಮಾರಿ ಎಂ., ಪಂಜ ಕ್ಷೇತ್ರದಲ್ಲಿ ಬಿಜೆಪಿಯ ಲೋಕೇಶ್ ಬರೆಮೇಲು, ಕಾಂಗ್ರೆಸಿನ ಅಬ್ದುಲ್ ಗಫೂರ್, ಪಕ್ಷೇತರ ಗುರುಪ್ರಸಾದ್ ಪಂಜ , ಗುತ್ತಿಗಾರು ಕ್ಷೇತ್ರದಲ್ಲಿ ಬಿಜೆಪಿಯ ಯಶೋದಾ ಬಾಳೆಗುಡ್ಡೆ, ಕಾಂಗ್ರೆಸಿನ ಶಶಿಕಲಾ ಅಡ್ಡನಪಾರೆ ಕಣದಲ್ಲಿದ್ದಾರೆ. ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಜೆಡಿಎಸ್‌ನ ನಾರಾಯಣ ಅಗ್ರಹಾರ, ಕಾಂಗ್ರೆಸಿನ ಅಶೋಕ್ ನೆಕ್ರಾಜೆ, ಬಿಜೆಪಿಯ ರಮಾನಂದ ಎಣ್ಣೆಮಜಲು, ಮಡಪ್ಪಾಡಿ ಕ್ಷೇತ್ರದಲ್ಲಿ ಕಾಂಗ್ರೆಸಿನ ಪಿ.ಸಿ.ಜಯರಾಮ, ಬಿಜೆಪಿಯ ಉದಯ ಕೆ.ಟಿ., ಐವರ್ನಾಡು ಕ್ಷೇತ್ರದಲ್ಲಿ ಬಿಜೆಪಿಯ ರಾಧಾಕೃಷ್ಣ ಬೊಳ್ಳೂರು, ಕಾಂಗ್ರೆಸಿನ ವೆಂಕಟ್ರಮಣ ಇಟ್ಟಿಗುಂಡಿ ಸ್ಪರ್ಧೆ ಎದುರು ನೋಡುತ್ತಿದ್ದಾರೆ. ಜಾಲ್ಸೂರು ಕ್ಷೇತ್ರದಲ್ಲಿ ಬಿಜೆಪಿಯ ಗೋಪಿನಾಥ್ ಬೊಳುಬೈಲು, ಕಾಂಗ್ರೆಸಿನ ತೀರ್ಥರಾಂ ಜಾಲ್ಸೂರು, ಅಜ್ಜಾವರ ಕ್ಷೇತ್ರದಲ್ಲಿ ಬಿಜೆಪಿಯ ಚನಿಯ ಕಲ್ತಡ್ಕ ಮತ್ತು ಕಾಂಗ್ರೆಸಿನ ರಾಮ ನೆಹರೂನಗರ, ನೆಲ್ಲೂರು ಕೆಮ್ರಾಜೆಯಲ್ಲಿ ಬಿಜೆಪಿಯ ವಿದ್ಯಾಲಕ್ಷ್ಮಿ ಎರ್ಮೆಟ್ಟಿ, ಕಾಂಗ್ರೆಸಿನ ಚಂದ್ರಕಲಾ ಪ್ರಭಾಕರ ಮಂಜಿಕಾನ, ಅರಂತೋಡು ಕ್ಷೇತ್ರದಲ್ಲಿ ಬಿಜೆಪಿಯ ಪುಷ್ಪಾ ಮೇದಪ್ಪ, ಕಾಂಗ್ರೆಸಿನ ಹೇಮಲತಾ ಕೊಳಲುಮೂಲೆ, ಆಲೆಟ್ಟಿ ಕ್ಷೇತ್ರದಲ್ಲಿ ಕಾಂಗ್ರೆಸಿನ ಸುಲೋಚನಾ ಪಾವಲಿಕಜೆ, ಬಿಜೆಪಿಯ ಪದ್ಮಾವತಿ ಕುಡೆಂಬಿ, ಬಾಳಿಲ ಕ್ಷೇತ್ರದಲ್ಲಿ ಬಿಜೆಪಿಯ ಜಾಹ್ನವಿ ಕಾಂಚೋಡು ಮತ್ತು ಕಾಂಗ್ರೆಸಿನ ಪ್ರವೀಣ ಪಿ. ರೈ ಮರುವಂಜ ಅಂತಿಮ ಕಣದಲ್ಲಿದ್ದಾರೆ.





