ಕುದ್ರೆಪಾಯ ಜಯರಾಮ ನಾಯ್ಕ ಕೊಲೆ ಪ್ರಕರಣ ಸುಳ್ಯ ಪೊಲೀಸರಿಂದ ಇಬ್ಬರ ಬಂಧನ
ಸುಳ್ಯ: ಕುದ್ರೆಪಾಯದ ಜಯರಾಮ ನಾಯ್ಕ ಕೊಲೆ ಪ್ರಕರಣಕ್ಕೆ ಸಂಭಂಧಿಸಿ ಸುಳ್ಯ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ತೊಡಿಕಾನ ಗ್ರಾಮದ ಚಳ್ಳಂಗಾಯದಲ್ಲಿದ್ದ ಜಯರಾಮ ನಾಯ್ಕ ಮೀನು ಬೇಟೆಗೆ ಹೋದವರು ಅಲ್ಲಿ ಗುಂಡು ತಗಲಿ ಮೃತಪಟ್ಟಿದ್ದರು. ಪವರ್‌ವೀಡರ್‌ನಿಂದ ತೋಟದ ಹುಲ್ಲು ತೆಗೆಯಲು ನಾಲ್ವರ ತಂಡವೊಂದು ಬಂದಿದ್ದು, ಅವರೂ ಅದೇ ಮನೆಯಲ್ಲಿದ್ದರು. ಪಟ್ರುಕೋಡಿಯ ಹರೀಶ, ವೇಣುಗೋಪಾಲ, ದೀಕ್ಷಿತ್ ಕೋಲ್ಚಾರು ಹಾಗೂ ಜಯರಾಮರ ಕಿರಿಯ ಸಹೋದರ ಎಂ.ವಿ.ಹರೀಶ್ ಮತ್ತು ಜಯರಾಂ ನಾಯ್ಕ ಸೇರಿ ಐವರು ಕುದ್ರೆಪಾಯದಿಂದ ಮೂರು ಕಿ.ಮೀ. ದೂರವಿರುವ ಮಾಪಲಕಜೆ ಎಂಬಲ್ಲಿಯ ತೋಡಿನಲ್ಲಿ ಮೀನು ಕಡಿಯಲು ಮಂಗಳವಾರ ರಾತ್ರಿ ತೆರಳಿದ್ದರು. ಕಾಡು ದಾರಿಯಾಗಿ ಸಾಗಿ ಹೊಳೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಜಯರಾಮ ನಾಯ್ಕರ ಎದೆಗೆ ಗುಂಡೇಟು ತಗುಲಿ ಅವರು ಮೃತಪಟ್ಟರು. ಆದರೆ ಗುಂಡು ಹಾರಿಸಿದವರು ಯಾರು? ಅದು ಆಕಸ್ಮಿಕವೋ? ಎಂಬ ಕುರಿತು ಸ್ಪಷ್ಟ ಮಾಹಿತಿ ಲಭಿಸಿರಲಿಲ್ಲ. ಜಯರಾಮರ ಮೃತದೇಹವನ್ನು ಅದೇ ಕಾಡುದಾರಿಯಾಗಿ ಹೊತ್ತು ವಾಸುದೇವ ಗೌಡರ ಚಳ್ಳಂಗಾಯದ ತೋಟಕ್ಕೆ ಹೊತ್ತು ತಂದ ಸಹಚರರು ಅಲ್ಲಿ ಅದನ್ನು ಇಳಿಸಿ ಮನೆಗೆ ಬಂದು ಜಯರಾಮರು ಮೂತ್ರ ಶಂಕೆಗೆಂದು ಹೋದಾಗ ಅವರಿಗೆ ಗುಂಡೇಟು ತಗಲಿದ್ದಾಗಿ ಕಥೆ ಕಟ್ಟಿ ಪೊಲೀಸರಿಗೆ ದೂರು ನೀಡಿದರು. ನೆರೆಮನೆಯವರು ಮತ್ತು ಪೊಲೀಸರು ಬಂದಾಗ ಕೂಡಾ ತಾವು ಹೆಣೆದ ಕಥೆಯನ್ನೇ ಅವರು ಹೇಳಿದರು. ಆದರೆ ಪೊಲೀಸರಿಗೆ ಇದರಲ್ಲಿ ಅನುಮಾನಗಳು ಕಂಡು ಬಂದು ನಾಲ್ವರನ್ನು ವಶಕ್ಕೆ ಪಡೆದು ಪ್ರತ್ಯ-ಪ್ರತ್ಯೇಕವಾಗಿ ವಿಚಾರಿಸಿದಾಗ ನಿಜ ಘಟನೆಗೆ ಬಯಲಿಗೆ ಬಂತು. ಆದರೆ ತಾವು ಗುಂಡು ಹಾರಿಸಿಲ್ಲ. ಹೊಳೆ ಬದಿ ಹೋಗುತ್ತಿದ್ದಾಗ ಕಾಡಿನಿಂದ ಯಾರೋ ಗುಂಡು ಹಾರಿಸಿದ್ದಾಗಿ ಶಂಕಿತರು ಹೇಳಿಕೆ ನೀಡಿದ್ದರು. ಎರಡೂ ಕೋನಗಳಿಂದ ಪೊಲೀಸರು ತನಿಖೆ ಆರಂಭಿಸಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶರಣಪ್ಪ ನೇತೃತ್ವದ ಪೊಲೀಸರ ತಂಡ ಸ್ಥಳಕ್ಕೆ ತೆರಳಿದ್ದು ಪರಿಶೀಲನೆ ನಡೆಸಿದ್ದರು. ಇದೀಗ ಗುಂಡು ಹೊಡೆದ ಬಂದೂಕು ಚಳ್ಳಂಗಾಯ ವಿಶ್ವನಾಥ ಎಂದೂ ಗುಂಡು ಹೊಡೆದ ವ್ಯಕ್ಷಿ ಚಳ್ಳಂಗಾಯ ರಾಮಚಂದ್ರ ಎಂದೂ ಪೊಲೀಸರು ಪತ್ತೆ ಹಚ್ಚಿದ್ದು, ಅವರಿಬ್ಬರನ್ನೂ ಬಂಧಿಸಲು ಯಶಸ್ವಿಯಾಗಿದ್ದಾರೆ.





