ಭಾರತ-ಪಾಕಿಸ್ತಾನ ಟ್ವೆಂಟಿ-20 ವಿಶ್ವಕಪ್ ಪಂದ್ಯಕ್ಕೆ ಮಾಜಿ ಯೋಧನ ಆಕ್ಷೇಪ

ಹೊಸದಿಲ್ಲಿ, ಫೆ.12: ಭಾರತ ಹಾಗೂ ಪಾಕಿಸ್ತಾನದ ನಡುವೆ ಮಾ.19 ರಂದು ಧರ್ಮಶಾಲಾದಲ್ಲಿ ಟ್ವೆಂಟಿ-20 ವಿಶ್ವಕಪ್ ಪಂದ್ಯ ಆಯೋಜಿಸಿರುವುದಕ್ಕೆ ಮಾಜಿ ಸೈನಿಕ ರೊಬ್ಬರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಭಯೋತ್ಪಾದನೆ ಹಾಗೂ ಟ್ವೆಂಟಿ-20 ಕ್ರಿಕೆಟ್ ಒಟ್ಟಿಗೆ ಇರಲು ಸಾಧ್ಯವಿಲ್ಲ. ಪಠಾಣ್‌ಕೋಟ್ ವಾಯು ನೆಲೆಯ ಮೇಲೆ ನಡೆದ ಉಗ್ರರ ದಾಳಿಯಿಂದಾಗಿ ಹಿಮಾಚಲ ಪ್ರದೇಶದ ಇಬ್ಬರು ಯೋಧರಾದ ಸಂಜೀವನ್ ರಾಣಾ ಹಾಗೂ ಜಗದೀಶ್ ಚಂದ್ ಸಾವನ್ನಪ್ಪಿದ್ದರು. ಭಾರತ-ಪಾಕ್ ನಡುವಿನ ಕ್ರಿಕೆಟ್ ಪಂದ್ಯವನ್ನು ರದ್ದುಪಡಿಸುವ ಮೂಲಕ ಹುತಾತ್ಮ ಯೋಧರ ಕುಟುಂಬದ ನೋವಿಗೆ ಸ್ಪಂದಿಸಬೇಕು ಹಾಗೂ ಅವರಿಗೆ ಗೌರವ ನೀಡಬೇಕು’’ ಎಂದು ಮಾಜಿ ಸೈನಿಕರ ಸಂಘದ ಅಧ್ಯಕ್ಷ ವಿಜಯ್ ಸಿಂಗ್ ಆಗ್ರಹಿಸಿದ್ದಾರೆ.
‘‘ಹಿಮಾಚಲ ಪ್ರದೇಶದಲ್ಲಿ ಪಾಕಿಸ್ತಾನದ ವಿರುದ್ಧ ಟ್ವೆಂಟಿ-20 ಪಂದ್ಯವನ್ನು ಆಯೋಜಿಸುವ ಮೂಲಕ ಬಿಸಿಸಿಐ ದೇಶಕ್ಕಾಗಿ ಪ್ರಾಣ ತೆತ್ತಿರುವ ಯೋಧರಿಗೆ ಅವಮಾನ ಮಾಡಿದೆ. ಯೋಧರ ಸಾಹಸ ಹಾಗೂ ತ್ಯಾಗವನ್ನು ಕಡೆಗಣಿಸಿದಂತಾಗಿದೆ. ಬಿಸಿಸಿಐ ರಾಷ್ಟ್ರಪ್ರೇಮ ಹಾಗೂ ರಾಷ್ಟ್ರೀಯತೆಗೆ ಧಕ್ಕೆ ತರಬಾರದೆಂದು’’ ವಿಜಯ್ ಸಿಂಗ್ ತಿಳಿಸಿದ್ದಾರೆ.





