ಪುತ್ತಿಗೆ-ಜಿ.ಪಂ ಬಿಜೆಪಿ ಅಭ್ಯರ್ಥಿಯಿಂದ ಬೆದರಿಕೆ ಸುದ್ದಿಗೋಷ್ಠಿಯಲ್ಲಿ ಚಂದ್ರಹಾಸ ಸನಿಲ್ ಆರೋಪ
ಮೂಡುಬಿದಿರೆ: ನಾಮಪತ್ರಪರಿಶೀಲನೆ ಸಂದರ್ಭ ಬಿಜೆಪಿ ಅಭ್ಯರ್ಥಿ, ಜಿ.ಪಂ ಮಾಜಿ ಅಧ್ಯಕ್ಷ ಸುಚರಿತ ಶೆಟ್ಟಿಯವರು ಗೂಂಡಾಗಿರಿ ಪ್ರದರ್ಶಿಸಿದ್ದಾರೆ. ತನಗೆ ಹಾಗೂ ಅಲ್ಲಿದ್ದ ಕಾಂಗ್ರೆಸ್ ಬೆಂಬಲಿಗರಿಗೆ ಬೆದರಿಕೆಯೊಡ್ಡಿದ್ದಾರೆ ಎಂದು ಪುತ್ತಿಗೆ-ಜಿ.ಪಂ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಚಂದ್ರಹಾಸ ಸನಿಲ್ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ.
ನಾನು ತೆರಿಗೆಯನ್ನು ಬಾಕಿ ಇಟ್ಟಿದ್ದೇನೆ ಎಂದು ಸುಚರಿತ ಶೆಟ್ಟಿ ಚುನಾವಣಾಧಿಕಾರಿಗೆ ದೂರು ನೀಡಿದ್ದು, ಸತ್ಯಕ್ಕೆ ದೂರವಾದ ವಿಷಯ. ಪಂಚಾಯಿತಿಗೆ ಕಟ್ಟಬೇಕಾದ ಎಲ್ಲ ಕರಗಳನ್ನು ಪಾವತಿಸಿದ್ದೇನೆ. ತೆರಿಗೆ ಬಾಕಿಯನ್ನು ಕೀಳುಮಟ್ಟದಲ್ಲಿ ಆರೋಪಿಸಿರುವುದು, ‘ಮಾದರಿ ರಾಜಕಾರಣಿ’ಯಾಗಿ ಎಂದು ಹೇಳಿಕೆ ನೀಡುವ ಸುಚರಿತ ಶೆಟ್ಟಿಯವರಿಗೆ ಭೂಷಣವಲ್ಲ ಎಂದು ಆರೋಪಿಸಿದ್ದಾರೆ.
ತನ್ನ ಸಂಬಂಧಿಕರ ಜಾಗ ಅತಿಕ್ರಮಿಸಿ, ಕಟ್ಟಡ ಕಟ್ಟಿರುವ ಸುಚರಿತರಿಗೆ ವಿರುದ್ಧ ಹೈಕೋರ್ಟ್ ತೀರ್ಪು ನೀಡಿದೆ. ಕಾನೂನುಬಾಹಿರವಾಗಿ ಕಟ್ಟಿದ ಕಟ್ಟಡವನ್ನು ನೆಲಸಮ ಮಾಡುವಂತೆಯೂ ಆದೇಶಿಸಿದೆ. ಗ್ರಾ.ಪಂ ಪಂಚಾಯಿತಿ ಚುನಾವಣೆ ವೇಳೆ ಮತ ಎಣಿಕೆ ಸಂದರ್ಭ ಸುಚರಿತ ಶೆಟ್ಟಿ ಅವರು ಮರು ಎಣಿಕೆ ಮಾಡಿಸಿರುವ ಪ್ರಕರಣಕ್ಕೆ ಸಂಬಂಧಿದಂತೆ ಮೂಡುಬಿದರೆ ನ್ಯಾಯಾಲಯದಲ್ಲಿ ಫೆ.15ರಂದು ವಿಚಾರಣೆ ನಡೆಯಲಿದೆ.
ಫಲಿತಾಂಶ ಬಂದ ಬಳಿಕ ಪಾಲಡ್ಕ ಪಂಚಾಯಿತಿ ಕಚೇರಿ ಮುಂದೆ ಗಲಾಟೆ ಮಾಡಿರುವುದು ಸುಚರಿತ ಶೆಟ್ಟಿ ಅವರಂತಹ ಅನುಭವಿ ರಾಜಕಾರಣಿಗೆ ಶೋಭೆ ತರುವಂತದಲ್ಲ. ಸೋಲುವ ಹತಾಶೆಯಿಂದಲೇ ಅವರು, ಕಾಂಗ್ರೆಸ್ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಚಂದ್ರಹಾಸ ಸನಿಲ್ ಹೇಳಿಕೆ ನೀಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಲೇರಿಯನ್ ಸಿಕ್ವೇರಾ, ಮೂಡಾ ಅಧ್ಯಕ್ಷ ಸುರೇಶ್ ಕೋಟ್ಯಾನ್, ಕಾಂಗ್ರೆಸ್ ಮುಖಂಡರಾದ ಪ್ರೇಮಾನಾಥ ಮಾರ್ಲ, ಸತೀಶ್ ಮಾರ್ಲ ಪಾಲಡ್ಕ, ಸುರೇಶ್ ಪ್ರಭು, ಸತೀಶ್ ಕೋಟ್ಯಾನ್, ಕುಮಾರ್ ಇರುವೈಲ್, ಗಣೇಶ್ ಸುದ್ದಿಗೋಷ್ಠಿಯಲ್ಲಿದ್ದರು.





