ಕರಿಯ ವ್ಯಕ್ತಿಯನ್ನು ಗುಂಡು ಹಾರಿಸಿ ಕೊಂದ ಪೊಲೀಸ್ ಅಧಿಕಾರಿ

ನ್ಯೂಯಾರ್ಕ್, ಫೆ. 12: 2014ರಲ್ಲಿ ನಿಶ್ಶಸ್ತ್ರಧಾರಿ ಕರಿಯ ವ್ಯಕ್ತಿಯೊಬ್ಬರನ್ನು ಗುಂಡು ಹಾರಿಸಿ ಕೊಂದ ಪ್ರಕರಣದಲ್ಲಿ ಆರೋಪಿ ಬಿಳಿಯ ಪೊಲೀಸ್ ಅಧಿಕಾರಿಯ ವಿರುದ್ಧದ ಆರೋಪಗಳು ಸಾಬೀತಾಗಿವೆ ಎಂದು ನ್ಯಾಯಾಲಯವೊಂದು ಗುರುವಾರ ತೀರ್ಪು ನೀಡಿದೆ.
28 ವರ್ಷದ ಅಕೈ ಗರ್ಲಿ ಸಾವಿಗೆ ಕಾರಣನಾದ ಪೊಲೀಸ್ ಅಧಿಕಾರಿ ಪೀಟರ್ ಲಿಯಾಂಗ್ ಈಗ 15 ವರ್ಷಗಳ ಜೈಲು ಶಿಕ್ಷೆಯನ್ನು ಎದುರಿಸುತ್ತಿದ್ದಾರೆ.
ಬ್ರೂಕ್ಲಿನ್‌ನ ಸಾರ್ವಜನಿಕ ವಸತಿ ಯೋಜನೆಯ ಕಟ್ಟಡದಲ್ಲಿ ಪೀಟರ್ ಲಿಯಾಂಗ್ ಹಾರಿಸಿದ ಗುಂಡು ಮೆಟ್ಟಿಲಿನ ಗೋಡೆಗೆ ಬಡಿದು ಗರ್ಲಿಯ ಎದೆಯನ್ನು ಹೊಕ್ಕಿತ್ತು.
ಬ್ರೂಕ್ಲಿನ್‌ನಲ್ಲಿ ನಡೆದ ಎರಡು ವಾರಗಳ ವಿಚಾರಣೆಯಲ್ಲಿ, ಆರೋಪಿಯು ಎರಡನೆ ದರ್ಜೆಯ ನರಹತ್ಯೆಯನ್ನು ನಡೆಸಿರುವುದು ಸಾಬೀತಾಗಿದೆ ಎಂದು ನ್ಯಾಯಾಲಯ ಘೋಷಿಸಿದೆ ಎಂದು ಪ್ರಾಸಿಕ್ಯೂಟರ್‌ಗಳು ಹೇಳಿದ್ದಾರೆ.
ನ್ಯಾಯಾಲಯವು ಎಪ್ರಿಲ್ 14ರಂದು ಶಿಕ್ಷೆಯ ಪ್ರಮಾಣವನ್ನು ಘೋಷಿಸಲಿದೆ. ವಸತಿ ಕಟ್ಟಡದ ತಪಾಸಣೆಯನ್ನು ಮುಗಿಸಿ ಲಿಯಾಂಗ್ ಮೆಟ್ಟಿಲಿನಲ್ಲಿ ಎಂಟನೆ ಮಹಡಿಗೆ ಇಳಿಯುತ್ತಿದ್ದಾಗ ಸಂತ್ರಸ್ತ ವ್ಯಕ್ತಿ ಮೇಲೆ ಏರಲು ಮೆಟ್ಟಿಲಿಗೆ ಕಾಲಿಡುತ್ತಿದ್ದರು ಎನ್ನಲಾಗಿದೆ. ಈ ಹಂತದಲ್ಲಿ ನಡೆದ ಪೊಲೀಸ್ ಅಧಿಕಾರಿ ಗಾಬರಿಯಿಂದ ನಿರಾಯುಧ ವ್ಯಕ್ತಿಯ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಹೇಳಲಾಗಿದೆ.
ಈ ಘಟನೆಯ ಬಳಿಕ ಅಮೆರಿಕದಲ್ಲಿ ಪೊಲೀಸರ ವಿರುದ್ಧ ಭಾರೀ ಪ್ರತಿಭಟನೆಗಳು ನಡೆದಿದ್ದವು.







