ಪ್ರಾಂಶುಪಾಲ ಸುದೇಶ್ ಆತ್ಮಹತ್ಯೆ ಪ್ರಕರಣ: ತಪ್ಪಿತಸ್ಥರ ವಿರುದ್ದ ಕ್ರಮ ತೆಗೆದುಕೊಳ್ಳದಂತೆ ಸಚಿವರೊಬ್ಬರ ಒತ್ತಡ
ಮಂಗಳೂರು,ಫೆ.12: ಮಡಿಕೇರಿಯ ಚೆನ್ನಮ್ಮ ಪಿ.ಯು. ಕಾಲೇಜಿನ ಪ್ರಾಂಶುಪಾಲ ಸುದೇಶ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ತಪ್ಪಿತಸ್ಥರ ವಿರುದ್ದ ಕ್ರಮ ತೆಗೆದುಕೊಳ್ಳದಂತೆ ಸಚಿವರೊಬ್ಬರ ಒತ್ತಡವಿದೆ ಎಂಬ ಮಾಹಿತಿಯಿದ್ದು ಇದು ನಿಜವಾಗಿದ್ದಲ್ಲಿ ಸಚಿವರ ವಿರುದ್ದ ದಲಿತ ನಿಂದನೆ ಪ್ರಕರಣವನ್ನು ದಾಖಲಿಸಲಾಗುವುದು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಸತ್ಯ ಭದ್ರಾವತಿ ಹೇಳಿದರು.
ನಗರದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸುದೇಶ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸುದೇಶ್ ಅವರಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದ ಚೆನ್ನಮ್ಮ ಪಿ.ಯು.ಕಾಲೇಜಿನ ಅಧ್ಯಕ್ಷ ಕರ್ನಲ್ ಬಿ.ಜಿ.ವಿ ಕುಮಾರ್ ಮತ್ತು ಉಪಾಧ್ಯಕ್ಷ ಎಂ.ಜಿ.ಬೋಪಣ್ಣ ವಿರುದ್ದ ಪೊಲೀಸ್ ಇಲಾಖೆ ಯಾವುದೆ ಕ್ರಮ ಕೈಗೊಂಡಿಲ್ಲ. ಮೃತಪಟ್ಟ ಸುದೇಶ್ ಪರಿಶಿಷ್ಟ ಜಾತಿ ಎಂಬ ಕಾರಣಕ್ಕೆ ಪೊಲೀಸ್ ಇಲಾಖೆ ತಪ್ಪಿತಸ್ಥರ ವಿರುದ್ದ ಕ್ರಮಕೈಗೊಳ್ಳುತ್ತಿಲ್ಲ. ಸಚಿವರೊಬ್ಬರು ಒತ್ತಡ ಹೇರುತ್ತಿರುವುದು ನಿಜವಾಗಿದ್ದಲ್ಲಿ ಅವರು ರಾಜ್ಯದ ಯಾವುದೆ ಜಿಲ್ಲೆಗೆ ತೆರಳಿದರು ಅವರ ವಿರುದ್ದ ಪ್ರತಿಭಟಿಸಲಾಗುವುದು ಎಂದು ಹೇಳಿದರು.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಕರ್ನಲ್ ಬಿ.ಜಿ.ವಿ ಕುಮಾರ್ ಮತ್ತು ಎಂ.ಜಿ.ಬೋಪಣ್ಣ ಅವರನ್ನು ಬಂಧಿಸಬೇಕು.ಕಾಲೇಜಿನ ಆಡಳಿತ ಮಂಡಳಿಯನ್ನು ವಜಾಗೊಳಿಸಿ ಅಧಿಕಾರಿಗಳನ್ನು ನೇಮಿಸಬೇಕು ಮತ್ತು ಮೃತ ಸುದೇಶ್ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಮುಗೇರ ಸಮುದಾಯದ ಸುದೇಶ್ ಉಪನ್ಯಾಸಕರಾಗಿ ಸೇರ್ಪಡೆಗೊಂಡು ಪ್ರಾಂಶುಪಾಲರಾಗಿ ಭಡ್ತಿಗೊಂಡಿದ್ದರು. ಈ ನಡುವೆ ಆಡಳಿತ ಮಂಡಳಿ ಅಧ್ಯಕ್ಷರ ಸಮುದಾಯದ ಉಪನ್ಯಾಸಕರೋರ್ವರಿಗೆ ಪ್ರಾಂಶುಪಾಲ ಹುದ್ದೆ ನೀಡಲು ಪ್ರಯತ್ನವಾಗಿತ್ತು. ಈ ಸಂದರ್ಭ ಆಡಳಿತ ಮಂಡಳಿ ಅಧ್ಯಕ್ಷ ಹಾಗೂ ಸುದೇಶ್ ಮಧ್ಯೆ ವಿವಾದವುಂಟಾಗಿತ್ತು . ಆದರೆ ಮೀಸಲಾತಿ ನಿಯಮ ಪ್ರಕಾರ ಸುದೇಶ್‌ಗೆ ಗೆಲುವಾಗಿತ್ತು. ಬಳಿಕ ಪ್ರಾಂಶುಪಾಲರಾಗಿ ಮುಂದುವರಿದಿದ್ದು ಯಾವುದೇ ಕಳಂಕ ಹೊಂದಿರಲಿಲ್ಲ. ಆದರೆ ಆಡಳಿತ ಮಂಡಳಿಯವರು ಸುಳ್ಳು ಆರೋಪಗಳನ್ನು ಹೊರಿಸಿ ಕಿರುಕುಳ ನೀಡಿ, ಜಾತಿನಿಂದನೆ ಕೂಡಾ ಮಾಡುತ್ತಿದ್ದರು ಎಂದು ಆರೋಪಿಸಿದರು.
ಕಾಲೇಜು ಉಪಪ್ರಾಂಶುಪಾಲರ ಪತ್ನಿ ಅದೇ ಕಾಲೇಜಿನಲ್ಲಿ ತಾತ್ಕಾಲಿಕ ನೆಲೆಯಲ್ಲಿ ಕರ್ತವ್ಯನಿರ್ವಹಿಸುತ್ತಿದ್ದಾರೆ. ಇತ್ತೀಚೆಗೆ ನಡೆದ ನೇಮಕಾತಿ ಸಂದರ್ಭ ಅವರನ್ನು ನೇಮಕಾತಿಗೊಳಿಸುವಂತೆ ಆಡಳಿತ ಮಂಡಳಿ ಅಧ್ಯಕ್ಷ ಲೆ.ಕರ್ನಲ್ ಬಿ.ಜಿ.ವಿ. ಕುಮಾರ್, ಎಂ.ಜಿ. ಬೋಪಣ್ಣ ಪ್ರಾಂಶುಪಾಲರಿಗೆ ಒತ್ತಡ ಹೇರಿ ಕಿರುಕುಳ ನೀಡಿದ್ದಾರೆ. ಹೀಗಾಗಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಯ ರಾಜ್ಯ ಸಂಘಟನಾ ಸಂಚಾಲಕ ಎಸ್.ಎನ್.ಮಲ್ಲಪ್ಪ, ರಾಜ್ಯ ಸಮಿತಿ ಸದಸ್ಯ ಎಸ್.ಸುಂದರ್ ಉಳ್ಳಾಲ್, ವಿಭಾಗೀಯ ಸಂಚಾಲಕ ಶೇಖರ್ ಹೆಜಮಾಡಿ, ದಲಿತ ನೌಕರರ ಒಕ್ಕೂಟ ದ ರಾಜ್ಯ ಪ್ರಧಾನ ಕಾರ್ಯದರ್ಶಿ ಜೆ.ಶ್ರೀನಿವಾಸಲು ಉಪಸ್ಥಿತರಿದ್ದರು.







