ಫೆ.13,14 ರಂದು ಶ್ರೀನಿವಾಸ ಶಿಕ್ಷಣ ಸಮೂಹ ಸಂಸ್ಥೆಗಳ ವಾರ್ಷಿಕೋತ್ಸವ ಮತ್ತು ಸ್ಥಾಪಕರ ದಿನಾಚರಣೆ
ಮಂಗಳೂರು : ಎ. ಶಾಮರಾವ್ ಪ್ರತಿಷ್ಠಾನಕ್ಕೊಳಪಟ್ಟ ಶ್ರೀನಿವಾಸ ಶಿಕ್ಷಣ ಸಮೂಹ ಸಂಸ್ಥೆಗಳ ವಾರ್ಷಿಕೋತ್ಸವ ಮತ್ತು ಸ್ಥಾಪಕರ ದಿನಾಚರಣೆ ಫೆ.13,14 ರಂದು ವಳಚ್ಚಿಲ್‌ನಲ್ಲಿನ ಶ್ರೀನಿವಾಸ ಶಿಕ್ಷಣ ಸಂಕೀರ್ಣದ ಆವರಣದಲ್ಲಿ ಜರಗಲಿದೆ ಎಂದು ಪ್ರಾಂಶುಪಾಲ ಡಾ. ಶ್ರೀನಿವಾಸ ಮಯ್ಯ ಡಿ. ತಿಳಿಸಿದರು.
ನಗರದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಬಾರಿಯ ಎ. ಶ್ಯಾಮರಾವ್ ಸ್ಮಾರಕ ಪ್ರಶಸ್ತಿಯನ್ನು ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಎಂ. ಮೋಹನ್ ಆಳ್ವ , ಶ್ಯಾಮರಾವ್ ಶಿಕ್ಷಕ ಪ್ರಶಸ್ತಿಯನ್ನು ಬೆಳ್ತಂಗಡಿ ನಡ ಸರ್ಕಾರಿ ಶಾಲಾ ಶಿಕ್ಷಕ ಯಾಕೂಬ್ ಮತ್ತು ಅತ್ಯುತ್ತಮ ಸಾಮಾಜಿಕ ಸೇವೆಗಾಗಿ ಸ್ಮಾರಕ ಪ್ರಶಸ್ತಿಯನ್ನು ರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನದ ಆಡಳಿತ ವ್ಯವಸ್ಥಾಪಕ ಕೃಷ್ಣ ಕುಮಾರ್ ಪೂಂಜ ಅವರಿಗೆ ನೀಡಲಾಗುವುದು ಎಂದು ತಿಳಿಸಿದರು.
ಫೆ.13 ರಂದು ನಡೆಯುವ ವಾರ್ಷಿಕೋತ್ಸವದಲ್ಲಿ ಸಂಸ್ಥೆಯ ವಿವಿಧ ವಿಭಾಗಗಳ 10 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಲಿದ್ದು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ವಿಶೇಷ ಸಾಧನೆ ಮಾಡಿದ 200 ಕ್ಕೂ ಅಧಿಕ ಮಂದಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ. ಬೆಂಗಳೂರು ಇನ್ಫೋಸಿಸ್ ಉಪಾಧ್ಯಕ್ಷ ಕೆ. ರಾಘವೇಂದ್ರ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದರು.
ಫೆ.14 ರಂದು ಸ್ಥಾಪಕರ ದಿನಾಚರಣೆಯಲ್ಲಿ ರಾಜ್ಯ ಉನ್ನತ ಶಿಕ್ಷಣ ಪರಿಷತ್ ಕಾರ್ಯನಿರ್ವಾಹಕ ನಿರ್ದೇಶಕ ಪ್ರೊ.ಎಸ್.ಎ. ಕೋರಿ ಮುಖ್ಯ ಅತಿಥಿಗಳಾಗಿರುವರು. ಈ ಸಂದರ್ಭ ವಿ.ವಿ. ಮಟ್ಟದಲ್ಲಿ ರ್ಯಾಂಕ್‌ಗಳಿಸಿದ ಸಂಸ್ಥೆಯ 29 ಮಂದಿ ವಿದ್ಯಾರ್ಥಿಗಳಿಗೆ ಎ. ಶಾಮರಾವ್ ಪ್ರತಿಷ್ಠಾನದ ಚಿನ್ನದ ಪದಕ ನೀಡಿ ಗೌರವಾರ್ಪಣೆ, ಶೈಕ್ಷಣಿಕ ಸಾಲಿನಲ್ಲಿ ಯಶಸ್ವಿ ಸಾಧನೆ ಮಾಡಿದ ಉಪನ್ಯಾಸಕರುಗಳಿಗೆ ಗೌರವಾರ್ಪಣೆ ಮತ್ತು ಶ್ಯಾಮರಾವ್ ಸ್ಮಾರಕ ಪ್ರಶಸ್ತಿ ಗಳನ್ನು ನೀಡಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರುಗಳಾದ ಡಾ. ಎ. ರಾಮಕೃಷ್ಣ ಶಬರಾಯ, ಪ್ರೊ. ಹರಿಪ್ರಕಾಶ್ ಯು.ಪಿ., ಪ್ರೊ. ಸುಬ್ರಹ್ಮಣ್ಯ ಕುಮಾರ್ ಹಾಗೂ ಅಖಿಲೇಶ್ ಉಪಸ್ಥಿತರಿದ್ದರು.







