ಬಾಲಕಿಗೆ ಲೈಂಗಿಕ ದೌರ್ಜನ್ಯ: ಆರೋಪಿಗೆ 16 ವರ್ಷ ಕಠಿಣ ಶಿಕ್ಷೆ

ಉಡುಪಿ ಜಿಲ್ಲೆಯ ಪ್ರಥಮ ಪೊಕ್ಸೊ ಪ್ರಕರಣದ ತೀರ್ಪು
ಉಡುಪಿ, ಫೆ.12: ಉಡುಪಿ ಜಿಲ್ಲೆಯಲ್ಲಿ ದಾಖಲಾದ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಲೈಂಗಿಕ ಹಲ್ಲೆ ಮತ್ತು ಕಿರುಕುಳ ಯತ್ನದ ಪ್ರಥಮ ಪೊಕ್ಸೊ ಪ್ರಕರಣದ ಆರೋಪಿಗೆ ಜಿಲ್ಲಾ ವಿಶೇಷ ನ್ಯಾಯಾಲಯವು 16 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ಶುಕ್ರವಾರ ಮಹತ್ವದ ತೀರ್ಪು ನೀಡಿದೆ.
80ಬಡಗುಬೆಟ್ಟು ಗ್ರಾಮದ ಆದರ್ಶ ನಗರದ ಶುಭ ಕುಮಾರ್(24) ಶಿಕ್ಷೆಗೆ ಗುರಿಯಾಗಿರುವ ಪ್ರಕರಣದ ಪ್ರಮುಖ ಆರೋಪಿ. ಇನ್ನೋರ್ವ ಆರೋಪಿ ಹೆಬ್ರಿ ನಾಡ್ಪಾಲು ಸಮೀಪದ ನೆಲ್ಲಿಕಟ್ಟೆಯ ಸುಧೀರ್(45)ನನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಇವರಿಬ್ಬರು ಮಣಿಪಾಲದ ಮಾಧವ ಕೃಪಾ ಆಂಗ್ಲ ಮಾಧ್ಯಮ ಶಾಲೆಯ ಬಸ್ಸಿನ ನಿರ್ವಾಹಕರಾಗಿದ್ದರು.
2013ರ ಸೆ.16ರಂದು ಅಪರಾಹ್ನ 12:30ರ ಸುಮಾರಿಗೆ ಸುಧೀರ್ ಶಾಲೆಯ ಆವರಣದಲ್ಲಿ ನಿಲ್ಲಿಸಿದ್ದ ಬಸ್‌ನಲ್ಲಿ ನರ್ಸರಿ ಬಾಲಕಿಯನ್ನು ಹೊಡೆದು ಬೆದರಿಸಿ ಒಬ್ಬಳನ್ನೇ ಬಸ್ಸಿನಲ್ಲಿ ಕುಳ್ಳಿರಿಸಿದ್ದನು. ಬಳಿಕ ಬಸ್ ಪ್ರವೇಶಿಸಿದ ಶುಭಕುಮಾರ್ ಏಕಾಂಗಿಯಾಗಿದ್ದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದನು.
ಅಂದಿನ ಪ್ರಭಾರ ಠಾಣಾಧಿಕಾರಿ ಸವಿತಾ ಹೂಗಾರ್ ಆರೋಪಿಗಳ ವಿರುದ್ಧ ಭಾದಂಸಂ ಕಲಂ376(1) ಮತ್ತು ಪೊಕ್ಸೊ ಕಾಯ್ದೆಯ 5,6,9,10, 12ರ ಕಲಂಗಳಡಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ಸಂದಭರ್ದಲ್ಲಿ ಅಭಿಯೋಜನೆ ಪರವಾಗಿ ಮಹತ್ವದ ಸಾಕ್ಷಿಗಳನ್ನು ವಿಚಾರಣೆಗೊಳಪಡಿಸಲಾಗಿತ್ತು.
ಈ ಕುರಿತು ತೀರ್ಪು ನೀಡಿದ ಉಡುಪಿಯ ಜಿಲ್ಲಾ ಮತ್ತು ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಶಿವಶಂಕರ್ ಅಮರಣ್ಣನವರ್, ಪ್ರಮುಖ ಆರೋಪಿ ಶುಭಕುಮಾರ್‌ಗೆ ಕಲಂ376(1)ರ ಅಪರಾಧಕ್ಕೆ 10 ವರ್ಷ ಕಠಿಣ ಶಿಕ್ಷೆ ಹಾಗೂ 5,000 ರೂ. ದಂಡ, ಪೊಕ್ಸೊ ಕಾಯ್ದೆಯಡಿಯ ಕಲಂ10ರ ಅಪರಾಧಕ್ಕೆ 5 ವರ್ಷ ಕಠಿಣ ಶಿಕ್ಷೆ ಹಾಗೂ 5,000ರೂ. ದಂಡ, ಕಲಂ12ರ ಅಪರಾಧಕ್ಕ್ಕೆೆ ಒಂದು ವರ್ಷ ಕಠಿಣ ಜೈಲು ಶಿಕ್ಷೆ ಮತ್ತು 3,000ರೂ. ದಂಡ ವಿಧಿಸಿ ಶಿಕ್ಷೆಗೆ ಗುರಿಪಡಿಸಿದ್ದಾರೆ. ಎರಡನೆ ಆರೋಪಿ ಸುಧೀರ್‌ನನ್ನು ದೋಷಮುಕ್ತಗೊಳಿಸಿ ಬಿಡುಗಡೆ ಮಾಡಿದ್ದಾರೆ. ಪ್ರಾಸಿಕ್ಯೂಷನ್ ಪರವಾಗಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ವಿಜಯ ವಾಸು ಪೂಜಾರಿ ವಾದವನ್ನು ಮಂಡಿಸಿದ್ದರು.







