ಸಮಸ್ತ ಸಮಾವೇಶ :ದೇಶದ ಜಾತ್ಯಾತೀತ ವ್ಯವಸ್ಥೆಯನ್ನು ದುರ್ಬಲಗೊಳಿಸಲು ಸಾಧ್ಯವಿಲ್ಲ - ಕೇರಳ ಗೃಹ ಸಚಿವ ರಮೇಶ್ ಚೆನ್ನಿತ್ತಲ

ಆಲಪ್ಪುಝ. ಫೆ 12: ತಮ್ಮ ಅಧಿಕಾರವನ್ನು ದುರುಪಯೋಗಿಸಿಕೊಂಡು ದೇಶದ ಜಾತ್ಯಾತೀತ ವ್ಯವಸ್ಥೆಯನ್ನು ದುರ್ಬಲಗೊಳಿಸಿ ಏಕಧರ್ಮಾಧಿಪತ್ಯ ಹೇರಲು ಕೆಲವರು ಶ್ರಮಿಸುತ್ತಿದ್ದಾರೆ. ಇದು ವ್ಯರ್ಥ ಪ್ರಯತ್ನವಾಗಿದ್ದು ಇಲ್ಲಿನ ಪ್ರಜ್ಞಾವಂತ ನಾಗರಿಕರು ಅದಕ್ಕೆ ಅವಕಾಶ ಮಾಡಿಕೊಡುವುದಿಲ್ಲ ಎಂದು ಕೇರಳದ ಗೃಹ ಸಚಿವ ರಮೇಶ್ ಚೆನ್ನಿತ್ತಲ ಅವರು ಹೇಳಿದರು.
ಸಮಸ್ತ ಕೇರಳ ಜಂ-ಇಯ್ಯತ್ತುಲ್ ಉಲಮಾದ 90ನೇ ವಾರ್ಷಿಕೋತ್ಸವದ ಅಂಗವಾಗಿ ಆಲಪ್ಪುಝದ ವರಕ್ಕಲ್ ಮುಲ್ಲಕ್ಕೋಯ ನಗರದಲ್ಲಿ ನಡೆಯುತ್ತಿರುವ ಅಧ್ಯಯನ ಶಿಬಿರದ ಎರಡನೇ ದಿನವಾದ ಶುಕ್ರವಾರೆ ನಮ್ಮ ದೇಶ ಎಂಬ ವಿಷಯದಲ್ಲಿ ವಿಚಾರ ಗೊಷ್ಠಿ ನಡೆಯನ್ನು ಅವರು ಮಾತನಾಡುತ್ತಿದ್ದರು.
ಒಬ್ಬ ವ್ಯಕ್ತಿ ಏನನ್ನು ತಿನ್ನಬೇಕು ಮತ್ತು ಏನನ್ನು ತಿನ್ನಬಾರದು, ಯಾವ ರೀತಿಯ ವಸ್ತ್ರ ತೊಡಬೇಕು, ಎಲ್ಲಿ ವಾಸ ಮಾಡಬೇಕು ಎನ್ನುವುದನ್ನು ತೀರ್ಮಾನಿಸುವ ಹಕ್ಕು ಬೇರೊಬ್ಬನಿಗಿಲ್ಲ ಅದು ದೇಶದ ಪ್ರತಿಯೋರ್ವ ಪ್ರಜೆಯ ವ್ಯಕ್ತಿ ಸ್ವಾತಂತ್ರ್ಯವಾಗಿದೆ. ಆದರೆ ಭಾರತದ ಕಾನೂನು ವ್ಯವಸ್ಥೆಯಲ್ಲಿ ಬದಲಾವಣೆ ತಂದು ಇಲ್ಲಿನ ಅಲ್ಪಸಂಖ್ಯಾತ ಮತ್ತು ದುರ್ಬಲ ವರ್ಗದ ಮೇಲೆ ಒಂದೇ ಧರ್ಮದ ಆಚಾರ ವಿಚಾರಗಳನ್ನು ಹೇರಲು ಕೆಲವೊಂದು ಶಕ್ತಿಗಳು ಪ್ರಯತ್ನಿಸುತ್ತಿದ್ದಾರೆ. ಇದು ಬಹಳ ಆತಂಕಕಾರಿಯಾಗಿದ್ದು, ಜನ ಇದರ ವಿರುದ್ಧ ಸೆಡೆದೇಳಲಿದ್ದಾರೆ ಎಂದರು.
ಮೊದಿಯವರಿಗೆ ಅಧಿಕಾರವು ಆಕಸ್ಮಿಕವಾಗಿ ಲಭಿಸಿದ್ದು, ಕೋಮುದ್ವೇಷ, ಹಗೆತನ ಆಡಳಿತಕ್ಕೆ ಧೀರ್ಘ ಕಾಲದ ಬಾಳ್ವಿಕೆ ಇಲ್ಲ. ಇತ್ತೀಚೆಗೆ ನಡೆದ ಹಲವಾರು ವಿಧಾನ ಸಭಾ, ಹಾಗೂ ಉಪ ಚುನಾವಣೆಗಳಲ್ಲಿ ಇದು ಸಾಬೀತುಗೊಳಿಸಿದೆ. ಮೋದಿಯಂತಹ ನೂರು ವ್ಯಕ್ತಿಗಳು ಪ್ರಧಾನಿಯಾಗಿ ಬಂದರೂ ಕೂಡ ಈ ದೇಶ ಜಾತ್ಯಾತೀತ ಪಾರಂಪರ್ಯವನ್ನು ಹೊಡೆದುರುಳಿಸಲು ಸಾಧ್ಯವಿಲ್ಲ. ಜಾತ್ಯಾತೀತವೆನ್ನುವುದು ಸಂವಿಧಾನ ಪುಸ್ತಕದಲ್ಲಿರುವ ಬರಹಳಿಗೆ ಮಾತ್ರ ಸೀಮಿತವಾಗಿಲ್ಲ. ಅದು ದೇಶದ ಪ್ರತಿಯೊಬ್ಬ ಪ್ರಜೆಯ ಭಾವನಾತ್ಮಕ ಸಂಬಂಧವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅದ್ಯಕ್ಷತೆಯನ್ನು ವಹಿಸಿದ್ದ ಪಾಣಕ್ಕಾಡ್ ಸಯ್ಯದ್ ಸಾದಿಕಲಿ ಶಿಹಾಬ್ ತಂಙಳ್ ಮಾತನಾಡಿ, ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆಯನ್ನು ಎದುರಿಸಲು, ಹಾಗೂ ದೇಶದ ಘನತೆ ಗೌರವವನ್ನು ಎತ್ತಿ ಹಿಡಿದುಕೊಂಡು ಇಲ್ಲಿನ ಪ್ರತಿಯೊಬ್ಬ ಪ್ರಜೆಯು ಶಾಂತಿ ಸಹಬಾಳ್ವೆಯ ಜೀವ ನಡೆಸುವಂತೆ ಒತ್ತು ನೀಡಲು ಸಮಸ್ತವು ಸದಾ ಶ್ರಮಿಸುತ್ತಿದೆ ಎಂದರು.
ಎಸ್.ಕೆ.ಎಸ್.ಎಸ್.ಎಫ್ ಪ್ರಧಾನ ಕಾರ್ಯದರ್ಶಿ ಸತ್ತಾರ್ ಪಂದಲ್ಲೂರ್ ಮುನ್ನುಡಿ ಭಾಷಣ ನಡೆಸಿದರು ಸಮಸ್ತ ಕೇಂದ್ರ ಮುಶಾವರ ಸದಸ್ಯರಾದ ಮಾಣಿಯೂರು ಅಹ್ಮದ್ ಮುಸ್ಲಿಯಾರ್ ಪ್ರಾರ್ಥನೆ ನಡೆಸಿದರು.
ಗೋಷ್ಟಿಯಲ್ಲಿ ಬಹುಸಂಸ್ಕೃತಿ ಮತ್ತು ಜಾತ್ಯಾತೀತತೆ ಎಂಬ ವಿಷಯದಲ್ಲಿ ಸಂಸದ ಇ.ಟಿ ಮುಹಮ್ಮದ್ ಬಶೀರ್, ಭಾರತ ಎದುರಿಸುತ್ತಿರುವ ಸವಾಲುಗಳು ಎಂಬ ವಿಷಯದಲ್ಲಿ ಸಂಸದ ಎನ್.ಕೆ ಪ್ರೇಮಚಂದ್ರನ್, ಸಂವಿಧಾನ ಮತ್ತು ನಾಗರಿಕ ಸಂಹಿತೆ ಎಂಬ ವಿಷಯದಲ್ಲಿ ಶಾಸಕ ಅಡ್ವೊಕೇಟ್ ಕೆ.ಎನ್.ಎ ಖಾದರ್ ವಿಷಯ ಮಂಡಿಸಿದರು. ಓಣಂಪಳ್ಳಿ ಮುಹಮ್ಮದ್ ಫೈಝಿ ಮೋಡರೇಟರಾಗಿ ಕಾರ್ಯ ನಿರ್ವಹಿಸಿದರು. ವಿಶೇಷ ಅತಿಥಿಗಳಾಗಿ ಶಾಸಕ ಡಾ. ತಾಮಸ್ ಐಸಕ್, ಜಿ ಸುಧಾಕರನ್, ಕಾಸರಗೋಡು ಶಾಸಕ ಎನ್.ಎ ನೆಲ್ಲಿಕ್ಕುನ್ನು, ಮಾಜಿ ಶಾಸಕ ಸಿ.ಟಿ ಅಹ್ಮದ್ ಅಲಿ ಉಪಸ್ಥಿತರಿದ್ದರು.
ಪಾಣಕ್ಕಾಡ್ ಸೆಯ್ಯದ್ ಮುನವ್ವರಲಿ ಶಿಹಾಬ್ ತಂಙಳ್, ಮುಸ್ತಫಾ ಮಾಸ್ಟರ್ ಮುಂಡುಪ್ಪಾರ, ಶಾಸಕರುಗಳಾದ ಡಾ.ಕೆ.ಟಿ ಜಲೀಲ್, ಪಿ ಉಬೈದುಲ್ಲಾ, ಟಿ.ಎನ್ ಪ್ರತಾಪನ್, ಪಿ.ಸಿ ವಿಷ್ಣುನಾಥ್, ಅಡ್ವೊಕೇಟ್ ಶಂಸುದ್ದೀನ್, ಶಾಫಿ ಪರಂಬಿಲ್, ಸಿ.ಪಿ ಮುಹಮ್ಮದ್, ಅಡ್ವೊಕೇಟ್ ಎಂ ಮುಹಮ್ಮದ್, ಆಲಪ್ಪುಝ ಪುರಸಭಾಧ್ಯಕ್ಷ ತೋಮಸ್ ಜೋಸೆಫ್, ಮಾಜಿ ಸಚಿವರುಗಳಾದ ಕೆ.ಕುಟ್ಟಿ ಅಹ್ಮದ್ ಕುಟ್ಟಿ, ಅಡ್ವೊಕೇಟ್ ಎನ್ ಸೂಫಿ ಶುಭ ಹಾರೈಸಿದರು.







