ತುಮಕೂರು: ಈಜಲು ಹೋದ ಮೂರು ಮಕ್ಕಳು ನೀರುಪಾಲು
.jpg)
ತುಮಕೂರು, ಫೆ.12: ಸುಡು ಬಿಸಿಲಿನ ಬೇಗೆಯಿಂದ ಬಸವಳಿದಿದ್ದರಿಂದ ಮೈತಂಪು ಮಾಡಿಕೊಳ್ಳಲು ಊರ ಹೊರಗಿದ್ದ ಕಟ್ಟೆಯಲ್ಲಿ ಈಜಾಡಲು ಹೋಗಿ ಕಟ್ಟೆಯಲ್ಲಿ ಮುಳುಗಿ ಮೂವರು ಮಕ್ಕಳು ಮೃತಪಟ್ಟಿರುವ ದಾರುಣ ಘಟನೆ ಶುಕ್ರವಾರ ಗುಬ್ಬಿ ತಾಲೂಕಿನ ಸಿ.ಎಸ್.ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೃತ ಬಾಲಕರನ್ನು ವೇಣುಗೋಪಾಲ್, ಶಶಿಧರ್ ಮತ್ತು ಚೇತನ್‌ಕುಮಾರ್ ಎಂದು ಗುರುತಿಸಲಾಗಿದೆ. ಮೃತಪಟ್ಟ ಮಕ್ಕಳು 13 ವರ್ಷದ ವಯಸ್ಸಿನವರಾಗಿದ್ದು, 7ನೆ ತರಗತಿಯಲ್ಲಿ ಓದುತ್ತಿದ್ದರು.
ಘಟನೆ ವಿವರ: ಜಿಪಂ, ತಾಪಂ ಚುನಾವಣೆಯ ಹಿನ್ನೆಲೆಯಲ್ಲಿ ಶಾಲೆಗಳಿಗೆ ರಜೆ ಇದ್ದ ಪ್ರಯುಕ್ತ ಮೂವರು ಸ್ನೇಹಿತರು ಒಂದಾಗಿ ಜಿಲ್ಲೆಯ ಗುಬ್ಬಿ ತಾಲೂಕಿನ ಸಿ.ಎಸ್.ಪುರ ಹೋಬಳಿಯ ಹುರುಳಗೆರೆ ಗ್ರಾಮದ ಪಕ್ಕದಲ್ಲಿರುವ ಕಟ್ಟೆಗೆ ಈಜಲು ತೆರಳಿದರು.
ಅಲ್ಪ-ಸ್ವಲ್ಪಈಜಲು ಬರುತ್ತಿದ್ದ ವೇಣುಗೋಪಾಲ್ ನೀರಿಗಿಳಿದು ಈಜಲು ಆರಂಭಿಸಿದ್ದಾನೆ. ಅದನ್ನು ನೋಡಿದ ಆತನ ಗೆಳೆಯರಾದ ಶಶಿಧರ್ ಮತ್ತು ಚೇತನ್‌ಕುಮಾರ್ ನೀರಿಗಿಳಿದು ಈಜುವ ವೇಳೆಯಲ್ಲಿ ಕಟ್ಟೆಯಲ್ಲಿ ಹೆಚ್ಚು ಕೆಸರು ಇದ್ದುದರಿಂದ ಮೇಲೇಳಲಾಗದೆ ನೀರಿನಲ್ಲಿ ಮುಳುಗಿ ಮೂವರು ಮಕ್ಕಳೂ ಮೃತಪಟ್ಟಿದ್ದಾರೆ.
ಈ ಸಂಬಂಧ ಸಿ.ಎಸ್.ಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಹುರುಳಗೆರೆ ಗ್ರಾಮದಲ್ಲಿ ನೀರವ ಮೌನ: ಮೂವರು ಶಾಲಾ ಮಕ್ಕಳು ನೀರಿನಲ್ಲಿ ಮುಳುಗಿ ಮೃತಪಟ್ಟ ಹಿನ್ನೆಲೆಯಲ್ಲಿ ಹುರುಳಗೆರೆ ಗ್ರಾಮದಲ್ಲಿ ನೀರವ ಮೌನ ಆವರಿಸಿತ್ತು. ಜಿಪಂ, ತಾಪಂ ಚುನಾವಣೆ ಹಿನ್ನೆಲೆಯಲ್ಲಿ ಶಾಲೆ ರಜೆ ಘೋಷಿಸಿದ್ದರಿಂದ ತಮ್ಮ ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಪೋಷಕರು ಮತ್ತು ಗ್ರಾಮಸ್ಥರು ಕಣ್ಣೀರು ಸುರಿಸುತ್ತಾ ಚುನಾವಣೆಗೆ ಹಿಡಿ ಶಾಪ ಹಾಕಿದರು.





