ಭಾರತಮಾತೆಗೆ ಅಪಮಾನ ಸಹಿಸಲಾಗದು: ಸ್ಮತಿ ಇರಾನಿ

ಹೊಸದಿಲ್ಲಿ, ಫೆ.12: ಸಂಸತ್ ದಾಳಿ ಪ್ರಕರಣದ ಅಪರಾಧಿ ಅಫ್ಝಲ್ ಗುರುವನ್ನು ನೇಣಿಗೇರಿಸಿರುವುದನ್ನು ಪ್ರತಿಭಟಿಸಲು ದಿಲ್ಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದಲ್ಲಿ ಕಾರ್ಯಕ್ರಮ ನಡೆಸಲಾಗಿದೆ ಎಂದು ಆರೋಪಿಸಿರುವ ಕೇಂದ್ರ ಸರಕಾರ ತೀವ್ರವಾಗಿ ಪ್ರತಿಕ್ರಿಯಿಸಿದೆ.
ಭಾರತ ಮಾತೆಗೆ ಮಾಡುವ ಯಾವುದೇ ಅಪಮಾನವನ್ನು ದೇಶ ಎಂದಿಗೂ ಸಹಿಸದು ಎಂದು ಕೇಂದ್ರ ಶಿಕ್ಷಣ ಸಚಿವೆ ಸ್ಮತಿ ಇರಾನಿ ಹೇಳಿದರೆ, ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ‘ಕಠಿಣ ಕ್ರಮ’ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ.
ಯಾರೇ ಆದರೂ ಭಾರತ ವಿರೋಧಿ ಘೋಷಣೆ ಕೂಗಿದರೆ ಅಥವಾ ದೇಶದ ಏಕತೆ ಮತ್ತು ಸಮಗ್ರತೆಯ ಕುರಿತು ಪ್ರಶ್ನೆಯೆತ್ತಿದರೆ ಅಂತಹವರನ್ನು ಸುಮ್ಮನೆ ಬಿಡುವುದಿಲ್ಲವೆಂದು ರಾಜನಾಥ್ ಟ್ವೀಟಿಸಿದ್ದಾರೆ.
ಎಡಪಂಥೀಯ ವಿದ್ಯಾರ್ಥಿ ಸಂಘಟನೆಯ ಕಾರ್ಯಕರ್ತರು ಸಹಿತ ವಿದ್ಯಾರ್ಥಿಗಳ ಗುಂಪೊಂದು ವಿವಿಯಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಭಾರತ ವಿರೋಧಿ ಘೋಷಣೆಗಳನ್ನು ಕೂಗಿದ್ದ ಆರೋಪದಲ್ಲಿ ಪೊಲೀಸರು ಗುರುವಾರ, ದೇಶದ್ರೋಹ ಹಾಗೂ ಕ್ರಿಮಿನಲ್ ಪಿತೂರಿ ಪ್ರಕರಣವೊಂದನ್ನು ದಾಖಲಿಸಿದ್ದಾರೆ.
ದೇಶದಲ್ಲಿ ಯಾವುದೇ ರಾಷ್ಟ್ರವಿರೋಧಿ ಚಟುವಟಿಕೆಯನ್ನು ಸರಕಾರ ಸಹಿಸದು ಎಂದಿರುವ ರಾಜನಾಥ್, ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವರ ವಿರುದ್ಧ ಸಾಧ್ಯವಿರುವ ಕಠಿಣಕ್ರಮ ಕೈಗೊಳ್ಳುವಂತೆ ತಾನು ಪೊಲೀಸರಿಗೆ ಸೂಚನೆ ನೀಡಿದ್ದೇನೆ ಎಂದಿದ್ದಾರೆ.
ಬಿಜೆಪಿಯ ವಿದ್ಯಾರ್ಥಿ ಘಟಕ ಎಬಿವಿಪಿ ಹಾಗೂ ಆಳುವ ಪಕ್ಷದ ಸಂಸದ ಮಹೇಶ್ ಗುರು, ಕಾರ್ಯಕ್ರಮದ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು.
‘ದಿ ಕಂಟ್ರಿ ವಿದೌಟ್ ಎ ಪೋಸ್ಟ್ ಆಫೀಸ್’ ಎಂದು ಹೆಸರಿಸಲಾಗಿದ್ದ ಕಾರ್ಯಕ್ರಮದಲ್ಲಿ 2013ರ ಫೆ.9ರಂದು ಅಫ್ಝಲ್‌ನನ್ನು ಗಲ್ಲಿಗೇರಿಸಿದುದರ ಸ್ಮರಣಾರ್ಥ ವಸ್ತುಪ್ರದರ್ಶನವೊಂದನ್ನು ಆಯೋಜಿಸಲಾಗಿತ್ತು.
ಸಾಂಸ್ಕೃತಿಕ ಕಾರ್ಯಕ್ರಮವೆಂದು ಪ್ರತಿಪಾದಿಸಲಾಗಿದ್ದ ಆ ಕಾರ್ಯಕ್ರಮಕ್ಕೆ ನೀಡಲಾಗಿದ್ದ ಅನುಮತಿಯನ್ನು ತಾವು ರದ್ದುಗೊಳಿಸಿದ್ದೇವೆಂದು ಜೆಎನ್‌ಯು ಹೇಳಿಕೊಂಡಿದೆ.
ಆದರೆ ಎಸ್‌ಎಫ್‌ಐಯು ಕಾರ್ಯಕ್ರಮದಲ್ಲಿ ತನ್ನ ಯಾವುದೇ ಪಾತ್ರವಿರುವುದನ್ನು ನಿರಾಕರಿಸಿದೆ.
ಸಂಘಟಕರಿಗೂ ಯಾವುದೇ ವಿದ್ಯಾರ್ಥಿ ಸಂಘಟನೆಗೂ ಸಂಬಂಧವಿಲ್ಲವೆಂದು ಎಸ್‌ಎಫ್‌ಐಯ ವಿಕ್ರಮ್ ಸಿಂಗ್ ಪ್ರತಿಪಾದಿಸಿದ್ದಾರೆ.





