ವಿ.ಸಿ.ನಾಲೆಯಲ್ಲಿ ಕೊಚ್ಚಿ ಹೋದ ವೈದ್ಯ ವಿದ್ಯಾರ್ಥಿಗಳು; ಇಬ್ಬರು ಸಾವು, ಓರ್ವ ನಾಪತ್ತೆ; ಇಬ್ಬರ ರಕ್ಷಣೆ

ಮಂಡ್ಯ, ಫೆ.12: ವಿ.ಸಿ.ನಾಲೆಗೆ ಇಳಿದಿದ್ದ ಐವರು ವೈದ್ಯ ವಿದ್ಯಾರ್ಥಿಗಳಲ್ಲಿ ನೀರಿನ ಸೆಳೆತಕ್ಕೆ ಸಿಲುಕಿ ಇಬ್ಬರು ಸಾವನ್ನಪ್ಪಿದ್ದು, ಓರ್ವ ನಾಪತ್ತೆಯಾಗಿದ್ದು, ಮತ್ತಿಬ್ಬರು ವಿದ್ಯಾರ್ಥಿಗಳು ಅಪಾಯದಿಂದ ಪಾರಾಗಿರುವ ಘಟನೆ ಶುಕ್ರವಾರ ಸಂಜೆ ನಡೆದಿದೆ. ಮಂಡ್ಯ ವೈದ್ಯಕೀಯ ವಿಜ್ಞಾನ ಕಾಲೇಜಿನ ಐವರು ವಿದ್ಯಾರ್ಥಿಗಳಾದ ಮೈಸೂರಿನ ಸಿಂಧೂ, ಗೌತಮ್, ತುಮಕೂರಿನ ಗಿರೀಶ್, ಬೆಂಗಳೂರಿನ ಶ್ರುತಿ ಮತ್ತು ಜೀವನ್ ಎಂಬವರು ಕೆರಗೋಡಿನ ಪ್ರಾಥಮಿಕ ಆರೋಗ್ಯ ಕೇಂದ್ರ ದಲ್ಲಿ ಸೇವಾಪೂರ್ವ ಅವಧಿಯನ್ನು ಪೂರೈಸುತ್ತಿದ್ದರು.
ಶುಕ್ರವಾರ ಈ ಐವರು ವಿದ್ಯಾರ್ಥಿಗಳು ಹುಲಿವಾನ ಬಳಿಯ ವಿ.ಸಿ.ನಾಲೆಯ ಬಳಿ ತೆರಳಿದ್ದಾರೆ. ಒಂದಷ್ಟು ದೂರ ನಾಲೆಯೊಳಗೆ ಕ್ರಮಿಸುತ್ತಿದ್ದಂತೆ ನೀರಿನ ಸೆಳವು ಹೆಚ್ಚಾಗಿದೆ. ನೋಡ ನೋಡುತ್ತಿದ್ದಂತೆ ಐವರು ವಿದ್ಯಾರ್ಥಿಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಈಜು ಬಾರದ ಈ ವಿದ್ಯಾರ್ಥಿಗಳು ಈ ರೀತಿ ಕೊಚ್ಚಿ ಹೋಗುತ್ತಿದುದನ್ನು ಗಮನಿಸಿದ ಸ್ಥಳೀಯ ಗ್ರಾಮಸ್ಥರು ಸಿಂಧೂ ಮತ್ತು ಗೌತಮ್ ಎಂಬವರನ್ನು ರಕ್ಷಿಸಿದ್ದಾರೆ.
ಗಿರೀಶ್ ಎಂಬ ವಿದ್ಯಾರ್ಥಿ ನಾಪತ್ತೆಯಾಗಿದ್ದು, ಈವರೆ ಗೂ ಪತ್ತೆಯಾಗಿಲ್ಲ. ಶ್ರುತಿ ಮತ್ತು ಜೀವನ್ ಈಜು ಬಾರದೆ ನೀರಿನಲ್ಲೇ ಮೃತಪಟ್ಟಿದ್ದಾರೆ. ಈ ಬಗ್ಗೆ ಗ್ರಾಮಾಂತರ ಠಾಣೆ ಪೊಲಿಸರು ಪ್ರಕರಣ ದಾಖಲಾಗಿದೆ.





