ಕೇಂದ್ರದಿಂದ ದಿಲ್ಲಿ ಪೊಲೀಸ್‌ನ ಕೇಸರೀಕರಣ: ಸಿಸೋಡಿಯಾ ಆರೋಪ

ಹೊಸದಿಲ್ಲಿ, ಫೆ.12: ಬಿಜೆಪಿ ನೇತೃತ್ವದ ಕೇಂದ್ರ ಸರಕಾರವು ದಿಲ್ಲಿ ಪೊಲೀಸ್ ಇಲಾಖೆಯನ್ನು ಕೇಸರೀಕರಣಗೊಳಿಸುತ್ತಿದೆ ಎಂದು ದಿಲ್ಲಿ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಅವರು ಶುಕ್ರವಾರ ಇಲ್ಲಿ ಗಂಭೀರ ಆರೋಪವನ್ನು ಮಾಡಿದರು.
ದಿಲ್ಲಿಯ ಆಪ್ ಸರಕಾರವು ಒಂದು ವರ್ಷವನ್ನು ಪೂರ್ಣಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಸುದ್ದಿಸಂಸ್ಥೆಯೊಂದಿಗೆ ಮಾತನಾಡುತ್ತಿದ್ದ ಅವರು,ಲೆಫ್ಟಿನೆಂಟ್ ಗವರ್ನರ್,ಪೊಲೀಸ್ ಮತ್ತು ಭ್ರಷ್ಟಾಚಾರ ನಿಗ್ರಹ ಘಟಕವನ್ನ್ನು ಬಳಸಿಕೊಂಡು ಹಾಗೂ ವರ್ಗಾವಣೆ ಮತ್ತು ನಿಯೋಜನೆಗಳ ಮೇಲಿನ ನಿಯಂತ್ರಣವನ್ನು ಕಿತ್ತುಕೊಳ್ಳುವ ಮೂಲಕ ಕೇಜ್ರಿವಾಲ್ ಸರಕಾರವು ಕಾರ್ಯ ನಿರ್ವಹಿಸದಂತೆ ಮಾಡಲು ಕೇಂದ್ರವು ಅಗ್ಗದ ತಂತ್ರಗಳಿಗೆ ಶರಣಾಗಿದೆ ಎಂದು ಝಾಡಿಸಿದರು. ಖಾಸಗಿ ಶಾಲೆಯೊಂದರಲ್ಲಿ ಆರು ವರ್ಷದ ವಿದ್ಯಾರ್ಥಿಯ ಸಾವು ಸಂಭವಿಸಿದೆ, ಆದರೆ ಈವರೆಗೂ ಯಾರನ್ನೂ ಬಂಧಿಸಲಾಗಿಲ್ಲ. ಸರಕಾರಿ ಶಾಲೆಯೊಂದರ ಶಿಕ್ಷಕನನ್ನು ಬರ್ಬರವಾಗಿ ಥಳಿಸಲಾಗಿದೆ. ಅಲ್ಲದೆ ಹಲವಾರು ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳು ನಡೆದಿವೆ,ಆದರೆ ಪೊಲೀಸರು ಯಾರನ್ನೂ ಬಂಧಿಸುತ್ತಿಲ್ಲ. ಬದಲಿಗೆ ತನ್ನ ಪತ್ನಿಯೊಂದಿಗೆ ಜಗಳವಾಡಿದ್ದಕ್ಕಾಗಿ ಆಪ್ ಶಾಸಕನನ್ನು ಪೊಲೀಸರು ಬಂಧಿಸುತ್ತಾರೆ. ಅಧಿಕಾರಿಗಳೊಂದಿಗೆ ಜಗಳವಾಡಿದ್ದಕ್ಕಾಗಿ ಇನ್ನೋರ್ವ ಶಾಸಕನನ್ನು ಬಂಧಿಸಿ ಪೌರುಷ ಮೆರೆಯುತ್ತಾರೆ ಎಂದು ಸಿಸೋಡಿಯಾ ಕುಟುಕಿದರು.
ಆಪ್‌ನ ಒಂದು ವರ್ಷದ ಆಡಳಿತದಲ್ಲಿ ವಿವಿಧ ಪ್ರಕರಣಗಳಲ್ಲಿ ಪಕ್ಷದ ಆರು ಶಾಸಕರನ್ನು ಪೊಲೀಸರು ಬಂಧಿಸಿದ್ದಾರೆ.
ಇಷ್ಟೊಂದು ಪ್ರಮಾಣದಲ್ಲಿ ಖಾಕಿಯ ಕೇಸರೀಕರಣ ಈ ಹಿಂದೆಂದೂ ಯಾವುದೇ ರಾಜ್ಯದಲ್ಲಿ ನಡೆದಿರಲಿಲ್ಲ. ದಿಲ್ಲಿ ಪೊಲೀಸರು ತಮ್ಮ ಜೀವಗಳನ್ನು ತ್ಯಾಗ ಮಾಡುವ ಮೂಲಕ ಖಾಕಿಗೆ ಗೌರವವನ್ನು ತಂದು ಕೊಟ್ಟಿದ್ದರು,ಆದರೆ ಕೇಂದ್ರವು ದಿಲ್ಲಿ ಪೊಲೀಸ್ ಇಲಾಖೆಯ ಕೇಸರೀಕರಣದಲ್ಲಿ ತೊಡಗಿದೆ ಎಂದು ಹೇಳಿದ ಸಿಸೋಡಿಯಾ, ಕೇಂದ್ರದ ನಿಲುವನ್ನು ಎದುರಿಸುವುದೇ ಆಪ್ ಸರಕಾರದ ಪಾಲಿಗೆ ಬೃಹತ್ ಸವಾಲಾಗಿದೆ ಎಂದರು.
ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಆಯ್ಕೆ ಮಾಡದ್ದಕ್ಕಾಗಿ ದಿಲ್ಲಿಯ ಜನರ ವಿರುದ್ಧ ಕೇಂದ್ರವು ಸೇಡು ತೀರಿಸಿಕೊಳ್ಳುತ್ತಿದೆ ಎಂದೂ ಅವರು ಆರೋಪಿಸಿದರು.







