ಜಿಲ್ಲಾ-ತಾಲೂಕು ಪಂಚಾಯತ್ ಸಮರ: 15 ಜಿಲ್ಲೆಗಳಲ್ಲಿ ಇಂದು ಮತದಾನ

ಬೆಂಗಳೂರು, ಫೆ. 12: ಮುಂದಿನ ವಿಧಾನಸಭಾ ಚುನಾ ವಣೆಯ ದಿಕ್ಸೂಚಿ ಎಂದೇ ಹೇಳಲಾಗುತ್ತಿರುವ ಜಿಲ್ಲಾ ಮತ್ತು ತಾಲೂಕು ಪಂಚಾಯತ್‌ನ ಮೊದಲ ಹಂತದ ಚುನಾವಣೆ ಫೆ.13ರಂದು ಬೆಳಗ್ಗೆ 7ಗಂಟೆಯಿಂದ ಸಂಜೆ 5ಗಂಟೆಯವರೆಗೆ ನಡೆಯಲಿದೆ.
ಕರ್ನಾಟಕ ರಾಜ್ಯ ಪಂಚಾಯತ್ ರಾಜ್ (ತಿದ್ದುಪಡಿ) ಕಾಯ್ದೆಯನ್ವಯ ಮೊದಲ ಚುನಾವಣೆ ಇದಾಗಿದ್ದು, ಕಡ್ಡಾಯ ಮತದಾನ ಮಾಡಬೇಕಿದೆ. ಹಕ್ಕು ಚಲಾಯಿಸದ ಮತದಾರರಿಗೆ ಶಿಕ್ಷೆ ಇಲ್ಲದಿದ್ದರೂ ‘ನೋಟಾ’ ಚಲಾಯಿಸಲು ಚುನಾವಣಾ ಆಯೋಗ ಅವಕಾಶ ಕಲ್ಪಿಸಿದೆ.
ಮೊದಲ ಹಂತದಲ್ಲಿ ಬೆಂಗಳೂರು ನಗರ, ಬೆಂ.ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ತುಮಕೂರು, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಹಾವೇರಿ, ಉತ್ತರ ಕನ್ನಡ, ಧಾರವಾಡ, ಗದಗ, ಬಾಗಲಕೋಟೆ, ಬೆಳಗಾವಿ ಸೇರಿದಂತೆ 15 ಜಿಲ್ಲೆಗಳಲ್ಲಿ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ನ್ಯಾಯಸಮ್ಮತ ಮತದಾನ ನಡೆಸಲು ಸಕಲ ಸಿದ್ಧತೆ ಕೈಗೊಳ್ಳಲಾಗಿದೆ.
1.46 ಕೋಟಿ ಮತದಾರರು: ಹದಿನೈದು ಜಿಲ್ಲೆಗಳ 522 ಜಿಲ್ಲಾ ಮತ್ತು 1,945 ತಾಲೂಕು ಪಂಚಾಯತ್ ಸ್ಥಾನಗಳಿಗೆ ಜಿಲ್ಲಾ-2087 ಮತ್ತು ತಾಲೂಕು-6288 ಮಂದಿ ಅಭ್ಯರ್ಥಿಗಳು ಚುನಾವಣಾ ಅಖಾಡದಲ್ಲಿದ್ದು, ಒಟ್ಟು 1.46 ಕೋಟಿ ಮತದಾರರು ಅಭ್ಯರ್ಥಿಗಳ ಹಣೆ ಬರಹವನ್ನು ನಾಳೆ(ಫೆ.13) ತೀರ್ಮಾನಿಸಲಿದ್ದಾರೆ.
ಆಯಾ ಜಿಲ್ಲೆ ಮತ್ತು ತಾಲೂಕು ಕೇಂದ್ರಗಳಿಂದ ಚುನಾವಣಾ ಸಿಬ್ಬಂದಿ ಮತ್ತು ಭದ್ರತಾ ಸಿಬ್ಬಂದಿ ಮತಯಂತ್ರ, ಅಗತ್ಯ ಪರಿಕರಗಳೊಂದಿಗೆ ಆಯಾ ಕ್ಷೇತ್ರಗಳ ಮತಗಟ್ಟೆಗಳಿಗೆ ಶುಕ್ರವಾರವೇ ತೆರಳಿದ್ದು, ಫೆ.13ರ ಬೆಳಗ್ಗೆ 7ರಿಂದ ಮತದಾನ ಕಾರ್ಯಕ್ಕೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.
ಮತಗಟ್ಟೆಯಿಂದ ನೂರು ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಮತಗಟ್ಟೆಗಳಿಗೆ ಹೆಚ್ಚುವರಿ ಭದ್ರತೆ ಕಲ್ಪಿಸಲಾಗಿದೆ. ನಕಲಿ ಮತದಾನ ತಡೆಗೆ ಆಯೋಗ ಅಗತ್ಯ ಕ್ರಮವನ್ನು ಕೈಗೊಂಡಿದೆ.
ಫೆ.15ಕ್ಕೆ ಅಗತ್ಯವಿದ್ದಲ್ಲಿ ಮರು ಮತದಾನ ನಡೆಸಲಾಗುವುದು, ಫೆ.23ರ ಬೆಳಗ್ಗೆ 8ರಿಂದ ಆಯಾ ತಾಲೂಕು ಕೇಂದ್ರಗಳಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದ್ದು, ಅದೇ ದಿನ ಮಧ್ಯಾಹ್ನದ ವೇಳೆಗೆ ಫಲಿತಾಂಶ ಪ್ರಕಟಗೊಳ್ಳುವ ಸಾಧ್ಯತೆಗಳಿವೆ ಎಂದು ಚುನಾವಣಾ ಆಯೋಗ ಹೇಳಿದೆ.
ಕ್ಷೇತ್ರಕ್ಕೆ ಸಂಬಂಧಪಡದವರು ಕ್ಷೇತ್ರ ಬಿಟ್ಟು ತೆರಳುವಂತೆ ಚುನಾವಣಾಧಿಕಾರಿ ಸೂಚನೆ
ಬೆಂಗಳೂರು,ಫೆ.12: ಹೆಬ್ಬಾಳ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ಬಹಿರಂಗ ಪ್ರಚಾರ ಕೊನೆಗೊಂಡಿದ್ದು, ಕ್ಷೇತ್ರಕ್ಕೆ ಸಂಬಂಧ ಪಡದೇ ಇರುವವರು ಕ್ಷೇತ್ರ ಬಿಟ್ಟು ತೆರಳುವಂತೆ ಚುನಾವಣಾಧಿಕಾರಿ ತಿಳಿಸಿದ್ದಾರೆ.
ಶನಿವಾರಕ್ಕೆ ಪ್ರಚಾರ ಕೊನೆಗೊಂಡಿದ್ದು, ಪ್ರಚಾರಕ್ಕಾಗಿ ಬಂದಿದ್ದ ರಾಜಕೀಯ ಪಕ್ಷಗಳ ಕಾರ್ಯಕರ್ತರು, ಮುಖಂಡರು, ಈ ಕೂಡಲೇ ಕ್ಷೇತ್ರ ಬಿಟ್ಟು ತೆರಳಬೇಕು. ಯಾವುದೇ ಕಾರಣಕ್ಕೂ ಹೋಟೆಲ್, ವಸತಿ ಗೃಹ, ಕಲ್ಯಾಣ ಮಂಟಪ, ಸಮುದಾಯ ಭವನ ಸೇರಿದಂತೆ ಎಲ್ಲಿಯೂ ಉಳಿಯುವಂತಿಲ್ಲ ಎಂದು ಬಿಬಿಎಂಪಿ ಆಯುಕ್ತ ಜಿ.ಕುಮಾರ ನಾಯಕ್ ಎಚ್ಚರಿಕೆ ನೀಡಿದ್ದಾರೆ.
ಚುನಾವಣಾ ಆಯೋಗದ ವೀಕ್ಷಣಾ ದಳ ಇದರ ಬಗ್ಗೆ ನಿಗಾ ವಹಿಸಲಿದ್ದು, ನಿಯಮ ಉಲ್ಲಂಘನೆ ಮಾಡುವವರು ಕಂಡು ಬಂದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದೆಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.
ಯೋಧ ಕೊಪ್ಪದ ಸಾವಿನಿಂದ ಚುನಾವಣೆ ಮುಂದಕ್ಕೆ; ಫೆ.15ರಂದು ಯಲಿಬಾಳ ಪಂಚಾಯತ್ ಚುನಾವಣೆ
ಬೆಂಗಳೂರು, ಫೆ.12: ವೀರ ಯೋಧ ಲಾನ್ಸ್ ನಾಯಕ್ ಹನುಮಂತಪ್ಪ ಕೊಪ್ಪದ ವೀರ ಮರಣವನ್ನಪ್ಪಿದ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಯಲಿಬಾಳ ಜಿಲ್ಲಾ-ತಾಲೂಕು ಪಂಚಾಯತ್ ಚುನಾವಣೆ ಮುಂದೂಡಲಾಗಿದೆ.
ಹನುಮಂತಪ್ಪ ರಾಮಪ್ಪ ಕೊಪ್ಪದ ವೀರಮರಣ ಹೊಂದಿರುವ ಹಿನ್ನೆಲೆಯಲ್ಲಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಬೆಟದೂರ ಗ್ರಾಮದಲ್ಲಿ ಅಪಾರ ಪ್ರಮಾಣದ ಜನದಟ್ಟಣೆಯಾಗುವುದರಿಂದ ಹಾಗೂ ಗ್ರಾಮದಲ್ಲಿ ದುಃಖದ ವಾತಾವರಣವಿರುವ ಹಿನ್ನೆಲೆಯಲ್ಲಿ ಫೆ.13ರಂದು ನಡೆಯಬೇಕಿದ್ದ ಯಲಿಬಾಳ ಜಿಲ್ಲಾ-ತಾಲೂಕು ಪಂಚಾಯತ್ ಚುನಾವಣೆಯು ಫೆ.15ರಂದು ನಡೆಯಲಿದೆ.
ಚುನಾವಣೆಗೆ ಕೆಎಸ್ಸಾರ್ಟಿಸಿ ಬಸ್‌ಗಳು
ಬೆಂಗಳೂರು, ಫೆ.12: ಇಂದು ಜಿಲ್ಲಾ-ತಾಲೂಕು ಪಂಚಾಯತ್‌ನ ಮೊದಲ ಹಂತದ ಚುನಾವಣೆ ಪ್ರಕ್ರಿಯೆ ಆರಂಭಗೊಂಡಿರುವ ಹಿನ್ನೆಲೆಯಲ್ಲಿ ಕೆಎಸ್ಸಾರ್ಟಿಸಿ ಸಂಸ್ಥೆಯ ಒಟ್ಟು 1,854 ಬಸ್‌ಗಳನ್ನು ಚುನಾವಣೆ ಕರ್ತವ್ಯಕ್ಕೆ ನಿಯೋಜಿಸಲಾಗಿದ್ದು, ಸಂಚಾರ ವ್ಯತ್ಯಯಕ್ಕೆ ಸಾರ್ವಜನಿಕರು ಸಹಕರಿಸುವಂತೆ ಸಂಸ್ಥೆಯು ಮನವಿ ಮಾಡಿದೆ.







