ವೇದ,ಉಪನಿಷತ್‌ಗಳಲ್ಲಿಲ್ಲದ ತಾರತಮ್ಯ ಶಬರಿಮಲೆಯಲ್ಲೇಕೆ? ಸರ್ವೋಚ್ಚ ನ್ಯಾಯಾಲಯದ ಪ್ರಶ್ನೆ
ಹೊಸದಿಲ್ಲಿ,ಫೆ.12: ವೇದಗಳು ಮತ್ತು ಉಪನಿಷತ್‌ಗಳು ಪುರುಷರು ಮತ್ತು ಮಹಿಳೆಯರ ನಡುವೆ ಯಾವುದೇ ತಾರತಮ್ಯವನ್ನು ಮಾಡಿಲ್ಲ,ಹೀಗಿರುವಾಗ ಶಬರಿಮಲೆ ದೇವಸ್ಥಾನದಲ್ಲೇಕೆ ಮಹಿಳೆಯರ ಪ್ರವೇಶವನ್ನು ನಿಷೇಧಿಸಲಾಗಿದೆ ಎಂದು ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ಪ್ರಶ್ನಿಸಿತು.
ಶಬರಿಮಲೆ ದೇವಸ್ಥಾನದಲ್ಲಿ 10ರಿಂದ 50 ವರ್ಷ ವಯೋಮಾನದ ಮಹಿಳೆಯರಿಗೆ ಪ್ರವೇಶ ನಿಷೇಧಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆಯನ್ನು ನಡೆಸುತ್ತಿರುವ ನ್ಯಾಯಾಲಯವು,ನಾವು ಸಂಕುಚಿತ ಧೋರಣೆಯನ್ನು ತಳೆಯುತ್ತಿಲ್ಲ. ಸಮಾನತೆಯ ಹಕ್ಕು ಮತ್ತು ಧಾರ್ಮಿಕ ಪದ್ಧತಿಯ ಹಕ್ಕುಗಳ ನಡುವೆ ಸಾಂವಿಧಾನಿಕ ಸಮತೋಲನವನ್ನು ಸಾಧಿಸಲು ನಾವು ಬಯಸಿದ್ದೇವೆ. ದೇವಸ್ಥಾನವು ಧಾರ್ಮಿಕ ಕೇಂದ್ರವಾಗಿದೆ ಮತ್ತು ಅದರ ಕಾರ್ಯ ನಿರ್ವಹಣೆ ನಿರ್ದಿಷ್ಟ ಮಾನದಂಡಗಳ ವ್ಯಾಪ್ತಿಯೊಳಗಿರಬೇಕು ಎಂದು ಹೇಳಿತು.
ಮಹಿಳೆಯರಿಗೆ ಪ್ರವೇಶ ನಿಷೇಧ ಪದ್ಧತಿಯು ಒಂದು ಸಾವಿರ ವರ್ಷಗಳಿಂದಲೂ ಅಸ್ತಿತ್ವದಲ್ಲಿದೆ,ಆದ್ದರಿಂದ ಈಗೇಕೆ ಅದನ್ನು ಕೆದಕಬೇಕು ಎಂದು ದೇವಸ್ಥಾನ ಮಂಡಳಿ ಪರ ವಕೀಲ ಕೆ.ಕೆ.ವೇಣುಗೋಪಾಲ ವಾದಿಸಿದರು.
ಈ ತಾರತಮ್ಯ ಎಂದಿನಿಂದ ದೇವಸ್ಥಾನದಲ್ಲಿ ಆರಂಭಗೊಂಡಿದೆ ಮತ್ತು ಅದಕ್ಕೆ ಐತಿಹಾಸಿಕ ಕಾರಣಗಳೇನು ಎನ್ನುವ ವಿವರಗಳನ್ನು ಆರು ವಾರಗಳಲ್ಲಿ ಸಲ್ಲಿಸುವಂತೆ ನ್ಯಾಯಾಲಯವು ದೇವಸ್ಥಾನ ಮಂಡಳಿ ಮತ್ತು ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿತು.





