ಕಬ್ಬು: ರೈತರಿಗೆ ಈ ವರ್ಷವೂ ತಪ್ಪದ ಸಂಕಟ..!
ಕಳಸಾ-ಬಂಡೂರಿ ನಾಲಾ ಜೋಡಣೆಗಾಗಿ ದೊಡ್ಡ ಮಟ್ಟದ ಹೋರಾಟ ನಡೆಸು ತ್ತಿರುವ ಉತ್ತರ ಕರ್ನಾಟಕ ರೈತರು ಬಹುದಿನಗಳಿಂದ ಹೊಸದೊಂದು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ.
ಈ ವರ್ಷದ ಕಬ್ಬು ಅರೆಯಬೇಕಾದರೆ ಕಳೆದ ವರ್ಷದ ಬಾಕಿ ಕೇಳಬೇಡಿ. ಈ ವರ್ಷದ ಎಫ್‌ಆರ್‌ಪಿ ದರ ಕೊಡೋಕ್ಕಾಗಲ್ಲ. ಇದಕ್ಕೆ ಸಮ್ಮತಿಯಿದ್ದರೆ ಕಬ್ಬು ತನ್ನಿ. ಇಲ್ಲದಿದ್ದರೆ ಬೇಡ ಎಂದು ಸಾಮಾನ್ಯವಾಗಿ ರಾಜ್ಯದ ಎಲ್ಲ ಸಕ್ಕರೆ ಕಾರ್ಖಾನೆ ಮಾಲಕರು ಷರತ್ತು ಹಾಕಿರುವುದು ರೈತರಲ್ಲಿ ತುಘಲಕ್ ಧರ್ಬಾರಲ್ಲದೇ ಮತ್ತೇನಲ್ಲ. ಇದಕ್ಕಾಗಿ ರೈತರು ಮತ್ತೊಮ್ಮೆ ಘೋರವಾಗಿ ಹೋರಾಟಕ್ಕಿಳ್ಳಿಯಬೇಕಾದ ಅನಿವಾರ್ಯತೆ ಎದುರಾಗಿದೆ.
ಅಕ್ಟೋಬರ್ ಮೊದಲ ವಾರದಲ್ಲಿ ಕಬ್ಬು ಅರೆಯುವ ಕಾರ್ಯ ಪ್ರಾರಂಭವಾಗಬೇಕು. ಸಕಾಲದಲ್ಲಿ ಕಬ್ಬು ಕಟಾವು ಮಾಡದಿದ್ದರೆ ಇಳುವರಿ ಕುಸಿತವಾಗಿ ರೈತರಿಗೆ ನಷ್ಟವುಂಟಾಗುತ್ತದೆ. ಜಮೀನಿನಲ್ಲೇ ಕಬ್ಬು ಒಣಗಲು ಆರಂಭಿಸುತ್ತದೆ. ಆದರೆ, ಉತ್ತರ ಕರ್ನಾಟಕ ಭಾಗದ 44 ಕಾರ್ಖಾನೆಗಳು ಕಬ್ಬು ಅರೆಯಲು ಸಿದ್ಧತೆಯನ್ನು ಮಾಡಿಕೊಂಡು ಬಹುದಿನಗಳಾಗಿವೆ. ಇದು ರೈತರನ್ನು ಚಿಂತೆಗೀಡು ಮಾಡಿದೆ.
2013-14ನೆ ಸಾಲಿನ ಬಾಕಿ 540 ಕೋಟಿ ರೂ., 2014-15ನೆ ಸಾಲಿನ ಬಾಕಿ 2,400 ಕೋಟಿ ರೂ. ಇದ್ದರೂ 2015-16ನೆ ಸಾಲಿನಲ್ಲಿ ಕೇಂದ್ರ ಸರಕಾರ ಪ್ರತಿ ಟನ್‌ಗೆ ನಿಗದಿಪಡಿಸಿರುವ 2,300 ರೂ. ಎಫ್‌ಆರ್‌ಪಿ ದರ ಕೇಳದೆ ಕಾರ್ಖಾನೆ ಮಾಲಕರು ಕೊಟ್ಟಷ್ಟು ಪಡೆಯಬೇಕು ಎಂಬ ಸ್ಥಿತಿ ರೈತರದ್ದಾಗಿದೆ.
ಟನ್‌ಗೆ 1,500 ರೂ. ಕೊಡ್ತೀವಿ’
‘‘ಸಕ್ಕರೆ ಬೆಲೆ ಕುಸಿದಿರುವುದರಿಂದ ಕೇಂದ್ರ ಹಾಗೂ ರಾಜ್ಯ ಸರಕಾರ ನಮ್ಮ ನೆರವಿಗೆ ಬರಬೇಕು ಎಂದು ಬೇಡಿಕೆ ಇಟ್ಟಿದ್ದೇವೆ. ಅದು ಇತ್ಯರ್ಥವಾಗುವವರೆಗೂ ಪ್ರತಿ ಟನ್‌ಗೆ 1,500 ದಿಂದ 1,800 ರೂ. ಅಷ್ಟೇ ಕೊಡಲು ಸಾಧ್ಯ’’ ಎಂದು ಸಕ್ಕರೆ ಕಾರ್ಖಾನೆ ಮಾಲಕರು ಹಠ ಹಿಡಿದು ಕುಳಿತಿದ್ದಾರೆ. ಇದು ರಾಜ್ಯ ಸರಕಾರಕ್ಕೂ ತಲೆನೋವಾಗಿ ಪರಿಣಮಿಸಿದೆ.
ಸಮಸ್ಯೆ ಏನೇ ಇದ್ದರೂ ಆಮೇಲೆ. ಸಕ್ಕರೆ ಕಾರ್ಖಾನೆಗಳು ಕಬ್ಬು ಪೂರೈಕೆ ಮಾಡಿದ ರೈತರಿಗೆ ಮೊದಲು ಎಫ್‌ಆರ್‌ಪಿ ದರ ಕೊಡಲೇಬೇಕು. ಸಕ್ಕರೆ ಬೆಲೆ ಕುಸಿತ ಹಿನ್ನೆಲೆಯಲ್ಲಿ ಕೇಂದ್ರ ಸರಕಾರವೂ ಮಧ್ಯಪ್ರವೇಶ ಮಾಡಬೇಕು. ರೈತರ ಹಿತರಕ್ಷಣೆಗಾಗಿ ಪ್ರತೀ ವರ್ಷವೂ ಸಾಧ್ಯವಿರುವ ಎಲ್ಲ ಸಹಾಯ ಮತ್ತು ನೆರವು ನೀಡುತ್ತಲೇ ಬಂದಿದ್ದೇವೆ ಎನ್ನುತ್ತಾರೆ ಸಕ್ಕರೆ ಹಾಗೂ ಸಹಕಾರ ಸಚಿವ ಎಚ್.ಎಸ್. ಮಹದೇವಪ್ರಸಾದ್. ಎಫ್‌ಆರ್‌ಪಿ ದರ ಕೊಡಿಸುವುದು ರಾಜ್ಯ ಸರಕಾರದ ಜವಾಬ್ದಾರಿ. ಸಕ್ಕರೆ ಜಪ್ತಿ ಮಾಡಿ ಹಣ ಕೊಡಿಸುತ್ತೇವೆಂದು ಸರಕಾರ ಹೇಳಿತ್ತಾದರೂ ಕೊನೆಗೆ ಖರೀದಿಗೆ ಯಾರೂ ಬರಲಿಲ್ಲ ಎಂದು ಕಾರ್ಖಾನೆ ಮಾಲಕರಿಗೆ ಸಕ್ಕರೆ ವಾಪಸ್ ಮಾಡಲಾಗಿದೆ. ಪ್ರತೀ ವರ್ಷ ಕಟಾವು ಸಂದರ್ಭದಲ್ಲಿ ಕಾರ್ಖಾನೆ ಮಾಲಕರು ಬೇಕಂತಲೇ ಹಠ ಹಿಡಿಯುತ್ತಾರೆ. ಸರಕಾರ ಸಕ್ಕರೆ ಕಾರ್ಖಾನೆ ಮಾಲಕರ ಹಿತವನ್ನಷ್ಟೇ ನೋಡಬಾರದು. ಎಂದು ಹೇಳುತ್ತಾರೆ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಮತ್ತು ಎಸ್.ಲಕ್ಷ್ಮೀನಾರಾಯಣ.
ಈ ಕಬ್ಬು ಜಗಳ ಎಲ್ಲಿಗೆ ಹೋಗಿ ಮುಟ್ಟುತ್ತದೆ ಎಂದು ಕಾದು ನೋಡಬೇಕಾಗಿದೆ.