ದೇವಟಿಪರಂಬುವಿನಲ್ಲಿ ಸ್ಮಾರಕ ನಿರ್ಮಾಣಕ್ಕೆ ಒತ್ತಾಯ

ಮಡಿಕೇರಿ, ಫೆ. 12: ಟಿಪ್ಪು ಸುಲ್ತಾನನಿಂದ ಕೊಡವರ ಹತ್ಯೆಯಾಗಿರುವ ಪ್ರದೇಶವೆಂದು ಹೇಳಲಾಗುತ್ತಿರುವ ನಾಪೋಕ್ಲು ಸಮೀಪದ ಐಯ್ಯಂಗೇರಿಯ ದೇವಟಿಪರಂಬುವಿಗೆ ಮಡಿಕೇರಿ ಕೊಡವ ಸಮಾಜದ ಪದಾಧಿಕಾರಿಗಳು ಭೇಟಿ ನೀಡಿ ಮಡಿದವರಿಗೆ ಗೌರವ ಅರ್ಪಿಸಿದರು. ಕೊಡವರೊಂದಿಗೆ ಸ್ನೇಹ ಹಸ್ತ ಚಾಚುವ ನಾಟಕವಾಡಿ 1785ರ ಡಿಸೆಂಬರ್ 13 ರಲ್ಲಿ ಔತಣಕೂಟಕ್ಕೆ ಆಹ್ವಾನಿಸಿದ ಟಿಪ್ಪು 60,000 ನಿರಾಯುಧ ಕೊಡವರನ್ನು ಗುಂಡಿಕ್ಕಿ ಹತ್ಯೆಗೈದಿದ್ದಲ್ಲದೇ, ಉಳಿದವರನ್ನು ಬಂಧಿಸಿ ಶ್ರೀ ರಂಗಪಟ್ಟಣಕ್ಕೆ ಕರೆದೊಯ್ದು ಇಸ್ಲಾಮ್ ಧರ್ಮಕ್ಕೆ ಮತಾಂತರಗೊಳಿಸಿದ್ದಾನೆ ಎನ್ನುವ ಆರೋಪವಿದೆ ಎಂದು ಕೊಡವ ಸಮಾಜದ ಪ್ರಮುಖರು ಅಭಿಪ್ರಾಯಪಟ್ಟರು.
ಟಿಪ್ಪುವಿನ ಕ್ರೌರ್ಯಕ್ಕೆ ಅಮಾಯಕರು ಬಲಿಯಾಗಿದ್ದು, ಪೂರ್ವಜರನ್ನು ನೆನಪಿಸಿಕೊಳ್ಳುವುದು ಮತ್ತು ಮುಂದಿನ ಪೀಳಿಗೆಗೆ ಇತಿಹಾಸವನ್ನು ತಿಳಿಸಬೇಕಾಗಿದೆ. ಈ ಕಾರಣದಿಂದ ಸರಕಾರ ಸ್ಮಾರಕ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಅಧಿಕಾರಿಗಳೊಂದಿಗೆ ಮಾತಿನ ಚಕಮಕಿ
ಅರಣ್ಯ ಇಲಾಖೆಯ ಸುಪರ್ದಿಯಲ್ಲಿರುವ ದೇವಟಿಪರಂಬುವನ್ನು ಪ್ರವೇಶಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಕೊಡವ ಸಮಾಜದ ಪದಾಧಿಕಾರಿಗಳಿಗೆ ತಡೆಯೊಡ್ಡಿದರು. ಈ ಸಂದರ್ಭ ಮಾತಿನ ಚಕಮಕಿ ನಡೆಯಿತು. ಕೊಡವ ಸಮಾಜದ ಪ್ರಮುಖರು ಅರಣ್ಯ ಇಲಾಖೆಯ ಮೇಲಧಿಕಾರಿಗಳನ್ನು ಸಂಪರ್ಕಿಸಿ ದೇವಟಿಪರಂಬುವಿಗೆ ಪ್ರವೇಶಿಸಲು ಅನುಮತಿ ಕೋರಿದರು. ಅಧಿಕಾರಿಗಳ ಒಪ್ಪಿಗೆಯ ನಂತರ ಸ್ಥಳಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭ ಮಾತನಾಡಿದ ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಮೂವೇರ ಶಂಭು ಸುಬ್ಬಯ್ಯ, ಕೊಡವ ಸಂಸ್ಕೃತಿಯಲ್ಲಿ ಹಿರಿಯರ ಆತ್ಮಕ್ಕೆ ಶಾಂತಿ ಕೋರಲು ಮೀದಿ ಇಡುವ ಸಂಪ್ರದಾಯವಿದೆ. ಆದರೆ ಅಧಿಕಾರಿಗಳು ಸಂಪ್ರದಾಯಕ್ಕೆ ತಡೆಯೊಡ್ಡುತ್ತಿರುವುದು ಖಂಡನೀಯವೆಂದರು. ಇತಿಹಾಸವನ್ನು ಅವಲೋಕಿಸಿ ಸ್ಮಾರಕ ನಿರ್ಮಾಣಕ್ಕೆ ಸರಕಾರ ಅವಕಾಶ ನೀಡಬೇಕೆಂದರು.
ಸ್ಥಳವನ್ನು ಪ್ರವೇಶಿಸಲು ಅರಣ್ಯ ಇಲಾಖೆ ನಿರ್ಬಂಧ ವಿಧಿಸುತ್ತಿದ್ದು, ಇಲಾಖೆಯ ಈ ಕ್ರಮವನ್ನು ಮಡಿಕೇರಿ ಕೊಡವ ಸಮಾಜ ತೀವ್ರವಾಗಿ ಖಂಡಿಸುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಕೊಡವ ಸಮಾಜದ ಪ್ರಮುಖರಾದ ಮುಂಡಂಡ ಪೂವಪ್ಪ, ಬೊಳ್ಳಜೀರ ಅಯ್ಯಪ್ಪ, ಮಂಡೀರ ದೇವಿ ಪೂಣಚ್ಚ, ಐಮುಡಿಯಂಡ ರಾಣಿ ಮಾಚಯ್ಯ, ಅರೆಯಡ ಪಿ. ರಮೇಶ್, ಶಾಂತೆಯಂಡ ಸನ್ನಿ ಪೂವಯ್ಯ, ತಾಪಂಡ ಸರೋಜ ತಮ್ಮಯ್ಯ, ಮಣವಟ್ಟೀರ ಚಿಣ್ಣಪ್ಪ, ಮಾದೇಟಿರ ಬೆಳ್ಯಪ್ಪ, ಮತ್ತಿತರರು ಹಾಜರಿದ್ದರು.







