ವೀರ ಯೋಧನಿಗೆ ಭಾವಪೂರ್ಣ ವಿದಾಯ

♦ ಹರಿದುಬಂದ ಜನಸಾಗರ ♦ ಮಣ್ಣಲ್ಲಿ ಮಣ್ಣಾದ ಹನುಮಂತಪ್ಪ ಕೊಪ್ಪದ
ಬೆಂಗಳೂರು, ಫೆ.12: ಸಿಯಾಚಿನ್ ಗ್ಲೇಸಿಯರ್‌ನಲ್ಲಿನ ಭಾರೀ ಹಿಮಪಾತದಲ್ಲಿ ಸಿಲುಕಿ ಚಿಕಿತ್ಸೆ ಫಲಿಸದೆ ಅಸುನೀಗಿದ್ದ ಭಾರತೀಯ ವೀರಯೋಧ ಲಾನ್ಸ್ ನಾಯಕ್ ಹನುಮಂತಪ್ಪ ಕೊಪ್ಪದ ಅಂತ್ಯ ಸಂಸ್ಕಾರವನ್ನು ಧಾರವಾಡದ ಕುಂದಗೋಳ ತಾಲೂಕಿನ ಹುಟ್ಟೂರು ಬೆಟದೂರಿನಲ್ಲಿ ಸಕಲ ಸರಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು.
ಭಾರೀ ಹಿಮಪಾತದಲ್ಲಿ ಸಿಲುಕಿ ಪವಾಡ ಸದೃಶ ರೀತಿಯಲ್ಲಿ ಬದುಕಿ ಬಂದಿದ್ದ ಕೊಪ್ಪದ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸಿ, ನಿನ್ನೆ ದಿಲ್ಲಿಯ ಮಿಲಿಟರಿ ಆರ್‌ಆರ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ವೈದ್ಯರ ಪ್ರಯತ್ನ ಹಾಗೂ ದೇಶದ ಜನತೆಯ ಪ್ರಾರ್ಥನೆ ಫಲಿಸದ ಹಿನ್ನೆಲೆಯಲ್ಲಿ ಯೋಧನ ಸಾವಿಗೆ ಇಡೀ ದೇಶವೇ ಕಂಬನಿ ಮಿಡಿದಿತ್ತು.
ನಿನ್ನೆ ರಾತ್ರಿಯೇ ದಿಲ್ಲಿಯಿಂದ ಹುಬ್ಬಳ್ಳಿಗೆ ವಿಶೇಷ ವಿಮಾನದಲ್ಲಿ ಕೊಪ್ಪದ ಅವರ ಪಾರ್ಥಿವ ಶರೀರವನ್ನು ತಂದು ಹುಬ್ಬಳ್ಳಿಯ ನೆಹರೂ ಮೈದಾನದಲ್ಲಿ ಬೆಳಗ್ಗೆ 7ರಿಂದ 10:30ರ ವರೆಗೆ ಸಾರ್ವಜನಿಕರ ದರ್ಶನಕ್ಕೆ ಇರಿಸಲಾಗಿತ್ತು. ಆ ಬಳಿಕ ಮೃತದೇಹವನ್ನು ವಿಶೇಷ ಆ್ಯಂಬುಲೆನ್ಸ್ ಮೂಲಕ ಹುಟ್ಟೂರಿಗೆ ಕೊಂಡೊಯ್ಯಲಾಯಿತು.
ಬೆಟದೂರಿನಲ್ಲಿ ಬೆಳಗ್ಗೆ 11:15ರ ಸುಮಾರಿಗೆ ಯೋಧ ಕೊಪ್ಪದ ಅವರ ಕುಟುಂಬದ ಬಂಧುಗಳು ವೀರಶೈವ ಸಮುದಾಯದ ವಿಧಿ- ವಿಧಾನಗಳನ್ನು ನೆರವೇರಿಸಿದರು. ಆ ಬಳಿಕ ಮರಾಠಾ ಇನ್‌ಫೆಂಟ್ರಿ ರೆಜಿಮೆಂಟ್‌ನಿಂದ ಆಗಮಿಸಿದ್ದ ಬ್ರಿಗೇಡಿಯರ್ ಪ್ರವೀಣ್ ಶಿಂಧೆ ನೇತೃತ್ವದ 200 ಮಂದಿ ಯೋಧರ ತಂಡ ಅಂತಿಮ ಸಂಸ್ಕಾರದ ವೇಳೆ ಮಿಲಿಟರಿ ಗೌರವ ವಂದನೆ ಸಲ್ಲಿಸಿದರು.
ಆ ನಂತರ ಹನುಮಂತಪ್ಪಕೊಪ್ಪದ ಅವರ ತಾಯಿ ಬಸವ್ವ, ಪತ್ನಿ ಮಹದೇವಿ, ಪುತ್ರಿ ನೇತ್ರಾ, ಸಹೋದರರಾದ ಗೋವಿಂದಪ್ಪ, ಬಸಪ್ಪ, ಮಂಜಪ್ಪ, ಸಹೋದರಿ ನೀಲವ್ವ ಬಂಧುಗಳು-ಮಿತ್ರರು ಸೇರಿದಂತೆ ಅಪಾರ ಸಂಖ್ಯೆಯ ಅಭಿಮಾನಿಗಳು ಭಾರವಾದ ಮನಸ್ಸಿನಿಂದ ಕಣ್ಣೀರು ಸುರಿಸುತ್ತಾ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.
ಬೆಟದೂರು ಗ್ರಾಮ ಪಂಚಾಯತ್ ಕಾರ್ಯಾಲಯದ ಪಕ್ಕದ ಕೆರೆ ದಂಡೆಯ ಮೇಲೆ ವೀರಯೋಧ ಹನುಮಂತಪ್ಪ ಕೊಪ್ಪದ ಅವರ ಪಾರ್ಥೀವ ಶರೀರವನ್ನು ಸಂಸ್ಕಾರ ಮಾಡಲಾಯಿತು. ಈ ವೇಳೆ ಸ್ಥಳದಲ್ಲಿ ನೆರೆದಿದ್ದ ಅಪಾರ ಅಭಿಮಾನಿಗಳು ‘ಹನುಮಂತಪ್ಪ ಅಮರ್ ರಹೇ, ಹನುಮಂತಪ್ಪ ಜಿಂದಾಬಾದ್, ಹನುಮಂತಪ್ಪ ಕೀ ಜೈ, ಮತ್ತೆ ಹುಟ್ಟಿ ಬಾ’ ಎಂಬ ಘೋಷಣೆಗಳನ್ನು ಕೂಗಿ ಯೋಧನಿಗೆ ಗೌರವ ಸಲ್ಲಿಸಿದರು.
ಹರಿದು ಬಂದ ಜನ ಸಾಗರ: ಹುಬ್ಬಳ್ಳಿಯ ನೆಹರೂ ಮೈದಾನದಲ್ಲಿ ಯೋಧ ಹನುಮಂತಪ್ಪ ಕೊಪ್ಪದ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕಾಗಿ ಇರಿಸಲಾಗಿತ್ತು.
ದೊಡ್ಡ ಸಂಖ್ಯೆಯಲ್ಲಿ ಸಾರ್ವಜನಿಕರು, ವಿದ್ಯಾರ್ಥಿಗಳು ಯೋಧನ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಗೌರವ ನಮನ ಸಲ್ಲಿಸಿದರು.
ಕೇಂದ್ರ ಸಚಿವ ಅನಂತಕುಮಾರ್, ಸಚಿವ ಎಚ್.ಕೆ.ಪಾಟೀಲ್, ಜಿಲ್ಲಾ ಉಸ್ತುವಾರಿ ಸಚಿವ ವಿನಯ್ ಕುಲಕರ್ಣಿ, ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್, ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ, ಧಾರವಾಡದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮಿ, ಮುರುಘಾ ಮಠದ ಶರಣರು, ರೇವಣ್ಣ ಸಿದ್ಧೇಶ್ವರ ಮಠದ ಬಸವರಾಜ ದೇವರು ಸ್ವಾಮಿ ಸೇರಿದಂತೆ ಹಲವು ಗಣ್ಯರು ಯೋಧನ ಅಂತ್ಯ ಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.
ಅಶ್ರುತರ್ಪಣ: ವೀರಯೋಧನ ಅಗಲಿಕೆ ಹಿನ್ನೆಲೆಯಲ್ಲಿ ಬೆಟದೂರಿನಲ್ಲಿ ಆಕ್ರಂದನ ಮುಗಿಲು ಮುಟ್ಟಿತ್ತು. ಅಲ್ಲಿ ನೆರೆದಿದ್ದ ಎಲ್ಲರ ಮುಖದಲ್ಲಿ ದುಃಖ ಮಡುಗಟ್ಟಿತ್ತು. ತಮ್ಮ ಕುಟುಂಬದ ಸದಸ್ಯರೊಬ್ಬರನ್ನು ಕಳೆದುಕೊಂಡವರಂತೆ ಎಲ್ಲರೂ ದುಗುಡಗೊಂಡಿದ್ದು ಕಂಡುಬಂತು.
ಯೋಧ ಹನುಮಂತಪ್ಪ ಕೊಪ್ಪದ ಅವರ ಪಾರ್ಥಿವ ಶರೀರವನ್ನು ವಿಶೇಷ ಆ್ಯಂಬುಲೆನ್ಸ್ ಮೂಲಕ ಬೆಟದೂರಿಗೆ ತಂದ ಕೂಡಲೇ ಗ್ರಾಮಸ್ಥರು ದುಃಖದ ಕಟ್ಟೆಯೊಡೆದಿತ್ತು. ಗ್ರಾಮದ ಯುವಕರಿಗೆ ಪ್ರೇರಣೆಯಾಗಿದ್ದ ಕೊಪ್ಪದ, ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಹೆಮ್ಮೆಯಿದೆ ಎಂದು ಗ್ರಾಮಸ್ಥರ ಹೇಳಿಕೆಯಾಗಿದೆ.







