ಮೂರು ಕ್ಷೇತ್ರಗಳ ಉಪಚುನಾವಣೆ: ಇಂದು ಮತದಾನ

ಬೆಂಗಳೂರು, ಫೆ.12: ಆಡಳಿತಾರೂಢ ಕಾಂಗ್ರೆಸ್ ಮತ್ತು ವಿಪಕ್ಷಗಳ ನಡುವೆ ಪ್ರತಿಷ್ಠೆ ಹಾಗೂ ತೀವ್ರಪೈಪೋಟಿ ಸೃಷ್ಟಿಸಿರುವ ಹೆಬ್ಬಾಳ, ದೇವದುರ್ಗ ಹಾಗೂ ಬೀದರ್ ಕ್ಷೇತ್ರಗಳ ಉಪ ಚುನಾವಣೆ ನಾಳೆ (ಫೆ.13) ಬೆಳಗ್ಗೆ 7ರಿಂದ ಸಂಜೆ 5:30ರ ವರೆಗೆ ನಡೆಯಲಿದ್ದು, ಘಟಾನುಘಟಿ ಅಭ್ಯರ್ಥಿಗಳ ಹಣೆಬರಹವನ್ನು ಮೂರು ಕ್ಷೇತ್ರಗಳ ಮತದಾರ ಬರೆಯಲಿದ್ದಾರೆ.
ಮೂರು ಕ್ಷೇತ್ರಗಳಲ್ಲಿಯೂ ಶಾಸಕರ ನಿಧನದ ಹಿನ್ನೆಲೆಯಲ್ಲಿ ಉಪ ಚುನಾವಣೆ ಎದುರಾಗಿದೆ. ಶಾಂತಿಯುತ ಚುನಾವಣೆಗೆ ಆಯೋಗ ಸಕಲ ಸಿದ್ಧತೆ ಕೈಗೊಂಡಿದ್ದು, ಶುಕ್ರವಾರ ರಾತ್ರಿಯೇ ಚುನಾವಣಾ ಸಿಬ್ಬಂದಿ ಮತಯಂತ್ರಗಳೊಂದಿಗೆ ಆಯಾ ಮತಗಟ್ಟೆಗೆ ತೆರಳಿದ್ದಾರೆ.
ಚುನಾವಣಾ ಬಿಗಿ ಭದ್ರತೆಗಾಗಿ ಸ್ಥಳೀಯ ಪೊಲೀಸ್ ಸಿಬ್ಬಂದಿಯೊಂದಿಗೆ ಅರೆ ಸೇನಾ ಪಡೆಯನ್ನು ನಿಯೋಜಿಸಲಾಗಿದೆ. ಮೂರು ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಅಭ್ಯರ್ಥಿಗಳು ಮತದಾರರ ಮನವೊಲಿಕೆಗೆ ಕೊನೆಯ ಕ್ಷಣದ ಕಸರತ್ತು ನಡೆಸಿದರು.
ಹೆಬ್ಬಾಳ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಅಬ್ದುಲ್ ರೆಹಮಾನ್ ಶರೀಫ್, ಬಿಜೆಪಿಯ ವೈ.ಎ.ನಾರಾಯಣಸ್ವಾಮಿ, ಜೆಡಿಎಸ್‌ನ ಇಸ್ಮಾಯೀಲ್ ಶರೀಫ್ ಸೇರಿ 20 ಮಂದಿ ಅಭ್ಯರ್ಥಿಗಳು ಚುನಾವಣಾ ಅಖಾಡದಲಿದ್ದಾರೆ.
ಅತ್ತ ದೇವದುರ್ಗ ಕ್ಷೇತ್ರದಲ್ಲಿ ಆಡಳಿತ ಪಕ್ಷದ ರಾಜಶೇಖರ ನಾಯಕ್, ಬಿಜೆಪಿಯ ಶಿವನಗೌಡ ನಾಯಕ್ ಹಾಗೂ ಜೆಡಿಎಸ್‌ನ ಕರೆಮ್ಮ ನಾಯಕ್ ಸೇರಿ ನಾಲ್ವರು ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ.







