ಮಾ.4ಕ್ಕೆ ದಿಲ್ಲಿಗೆ ನ್ಯಾಯಯಾತ್ರೆ
ಬೆಂಗಳೂರು, ಫೆ. 12: ದೇಶ ವ್ಯಾಪಿ ಪಾರದರ್ಶಕ ನ್ಯಾಯಾಂಗ ವ್ಯವಸ್ಥೆ ತಂದು ಮಿತಿಯೊಳಗೆ ಪ್ರಕರಣಗಳ ವಿಚಾರಣೆ ನಡೆಸಿ ಇತ್ಯರ್ಥ ಪಡಿಸುವಂತೆ ಒತ್ತಾಯಿಸಿ ಫೋರಂ ಫಾರ್ ಫಾಸ್ಟ್ ಜಸ್ಟೀಸ್ ಸಂಘಟನೆ ಜ.30ರಂದು ಕೈಗೊಂಡಿದ್ದ ನ್ಯಾಯಯಾತ್ರೆ ಮಾ.4ಕ್ಕೆ ಜಂತರ್‌ಮಂತರ್ ತಲುಪಲಿದೆ ಎಂದು ಕ್ರಿಸ್ಪ್ ಅಧ್ಯಕ್ಷ ಕುಮಾರ್ ಜಾಗೀರ್‌ದಾರ್ ತಿಳಿಸಿದ್ದಾರೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜ.30ರಂದು ರಾಜ್‌ಘಾಟ್‌ನಿಂದ ಈ ನ್ಯಾಯಯಾತ್ರೆ ಆಂದೋಲನವನ್ನು ಪ್ರಾರಂಭಿಸಲಾಯಿತು. ದೇಶದಲ್ಲಿ ಒಟ್ಟು 17 ಸಾವಿರ ಕಿ.ಮೀ. ಚಲಿಸಿ ಹಲವಾರು ರಾಜ್ಯಗಳ ಹೋಬಳಿ ಕೇಂದ್ರ, ಪ್ರಮುಖ ಗ್ರಾಮಗಳಲ್ಲಿ ಸಂಚರಿಸಿರುವ ಆಂದೋಲನ ಮಾ.4ರಂದು ಜಂತರ್‌ಮಂತರ್‌ಗೆ ವಾಪಸಾಗಲಿದೆ ಎಂದು ತಿಳಿಸಿದರು. ಮಾ.5 ಮತ್ತು 6ರಂದು ಹೊಸದಿಲ್ಲಿಯಲ್ಲಿ ರಾಷ್ಟ್ರೀಯ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದ್ದು, ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಸರಕಾರವನ್ನು ಒತ್ತಾಯಿಸಲಾಗುವುದು ಎಂದು ಹೇಳಿದರು.
ಕುಟುಂಬ ವಿವಾದ, ಭ್ರಷ್ಟಾಚಾರ, ಪರಿಸರ ಸಂಬಂಧ ಪ್ರಕರಣಗಳನ್ನು ತ್ವರಿತವಾಗಿ, ನ್ಯಾಯಬದ್ಧವಾಗಿ ವಿಚಾರಣೆ ನಡೆಸಿ ನ್ಯಾಯ ದೊರಕಿಸಿಕೊಡಬೇಕು. ನ್ಯಾಯಾಲಯದ ಕಲಾಪಗಳನ್ನು ಧ್ವನಿ ಮತ್ತು ದೃಶ್ಯ ವೀಡಿಯೋ ಮಾಡಲು ಅವಕಾಶ ಮಾಡಿಕೊಡಬೇಕು. ಪ್ರಮುಖ ಗ್ರಾಮಗಳಲ್ಲಿ ನ್ಯಾಯಾಲಯಗಳನ್ನು ಸ್ಥಾಪಿಸಬೇಕು. ತಂತ್ರಜ್ಞಾನ ಅಳವಡಿಕೆ, ಖಾಲಿ ಇರುವ ಹುದ್ದೆಗಳಿಗೆ ನ್ಯಾಯಾಧೀಶರನ್ನು ಶೀಘ್ರ ನೇಮಕ ಮಾಡಿಕೊಳ್ಳುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಬೇಕೆಂದು ಕೇಂದ್ರ ಸರಕಾರವನ್ನು ಒತ್ತಾಯಿಸುತ್ತೇವೆ ಎಂದು ಕುಮಾರ್ ಜಾಗೀರ್‌ದಾರ್ ತಿಳಿಸಿದರು.







