ಮೊದಲ ಟೆಸ್ಟ್ ಪಂದ್ಯ: ಕಿವೀಸ್ ವಿರುದ್ಧ ಆಸೀಸ್ ಮೇಲುಗೈ
ವೆಲ್ಲಿಂಗ್ಟನ್, ಫೆ.12: ನಾಯಕ ಸ್ಟೀವನ್ ಸ್ಮಿತ್ ಹಾಗೂ ಅಗ್ರ ಸರದಿಯ ದಾಂಡಿಗ ಉಸ್ಮಾನ್ ಖ್ವಾಜಾ ನ್ಯೂಝಿಲೆಂಡ್ ವಿರುದ್ಧ ಶುಕ್ರವಾರ ಇಲ್ಲಿ ಆರಂಭವಾದ ಮೊದಲ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಕ್ಕೆ ಮೇಲುಗೈ ಒದಗಿಸಿಕೊಟ್ಟಿದ್ದಾರೆ.
ಮೊದಲು ಬ್ಯಾಟಿಂಗ್ ಮಾಡಿದ್ದ ನ್ಯೂಝಿಲೆಂಡ್ ತಂಡವನ್ನು ಕೇವಲ 48 ಓವರ್‌ಗಳಲ್ಲಿ 183 ರನ್‌ಗೆ ಕಟ್ಟಿಹಾಕಿದ ಆಸ್ಟ್ರೇಲಿಯ ಮೊದಲ ದಿನದಾಟದಂತ್ಯಕ್ಕೆ 3 ವಿಕೆಟ್‌ಗಳ ನಷ್ಟಕ್ಕೆ 147 ರನ್ ಗಳಿಸಿದ್ದು, ಕೇವಲ 36 ರನ್ ಹಿನ್ನಡೆಯಲ್ಲಿದೆ. ಕಳಪೆ ಫಾರ್ಮ್‌ನಿಂದ ಕೊನೆಗೂ ಹೊರಬಂದಿರುವ ಸ್ಮಿತ್ 71 ರನ್ ಗಳಿಸಿ ಮಾರ್ಕ್ ಕ್ರೆಗ್‌ಗೆ ವಿಕೆಟ್ ಒಪ್ಪಿಸಿದರು. ಟೆಸ್ಟ್‌ನಲ್ಲಿ ನಾಲ್ಕನೆ ಅರ್ಧಶತಕ ಸಿಡಿಸಿದ ಖ್ವಾಜಾ(ಔಟಾಗದೆ 57) ಹಾಗೂ ಆಡಮ್ ವೋಗ್ಸ್(ಔಟಾಗದೆ 7) ಕ್ರೀಸ್ ಕಾಯ್ದುಕೊಂಡಿದ್ದಾರೆ.
ಕಿವೀಸ್ 183 ರನ್‌ಗೆ ಆಲೌಟ್: ಇದಕ್ಕೆ ಮೊದಲು ಆಸ್ಟ್ರೇಲಿಯ ನಾಯಕ ಸ್ಮಿತ್‌ರಿಂದ ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ನ್ಯೂಝಿಲೆಂಡ್ ಆರಂಭದಲ್ಲೇ ಎಡವಿತು. 12ನೆ ಓವರ್‌ನಲ್ಲಿ 51 ರನ್‌ಗೆ 5 ವಿಕೆಟ್‌ಗಳನ್ನು ಕಳೆದುಕೊಂಡ ಕಿವೀಸ್‌ಗೆ ವೇಗದ ಬೌಲರ್‌ಗಳಾದ ಜೋಶ್ ಹೇಝಲ್‌ವುಡ್ ಹಾಗೂ ಪೀಟರ್ ಸಿಡ್ಲ್ ಸವಾಲಾಗಿ ಪರಿಣಮಿಸಿದರು.
ಹೇಝಲ್‌ವುಡ್ 42 ರನ್‌ಗೆ 4 ವಿಕೆಟ್ ಹಾಗೂ ಸಿಡ್ಲ್ 37 ರನ್‌ಗೆ 3 ವಿಕೆಟ್ ಪಡೆದರು. ಆಫ್ ಸ್ಪಿನ್ನರ್ ಲಿನ್ 32 ರನ್‌ಗೆ 3 ವಿಕೆಟ್‌ಗಳನ್ನು ಉಡಾಯಿಸಿ ಕಿವೀಸ್ ತಂಡವನ್ನು ಕನಿಷ್ಠ ಮೊತ್ತಕ್ಕೆ ಕಟ್ಟಿಹಾಕಿದರು.
ನ್ಯೂಝಿಲೆಂಡ್‌ನ ಪರ ಮಾರ್ಕ್ ಕ್ರೆಗ್(ಔಟಾಗದೆ 41) ಅಗ್ರ ಸ್ಕೋರರ್ ಎನಿಸಿಕೊಂಡರು. ಆಸ್ಟ್ರೇಲಿಯದ ಆರಂಭ ಕೂಡ ಉತ್ತಮವಾಗಿರಲಿಲ್ಲ. ಜೋ ಬರ್ನ್ಸ್(0) ಹಾಗೂ ಡೇವಿಡ್ ವಾರ್ನರ್(5) ಇನಿಂಗ್ಸ್‌ನ 3ನೆ ಓವರ್‌ಗೆ ಪೆವಿಲಿಯನ್ ಸೇರಿಕೊಂಡರು. ಆಗ ಆಸ್ಟ್ರೇಲಿಯ 5 ರನ್‌ಗೆ 2 ವಿಕೆಟ್ ಕಳೆದುಕೊಂಡಿತ್ತು.
ಸೌಥಿ ಹಾಗೂ ಟ್ರೆಂಟ್ ಬೌಲ್ಟ್ ಆಸ್ಟ್ರೇಲಿಯದ ಸ್ಮಿತ್ ಹಾಗೂ ಖ್ವಾಜಾ ಅವರ ಮೇಲೆ ಒತ್ತಡ ಹೇರಲು ಯತ್ನಿಸಿದರು. ಆದರೆ, ಈ ಇಬ್ಬರು ಆಟಗಾರರು 3ನೆ ವಿಕೆಟ್‌ಗೆ 126 ರನ್ ಜೊತೆಯಾಟ ನಡೆಸಿ ತಂಡಕ್ಕೆ ಆಸರೆಯಾದರು. ದಿನದಾಟ ಕೊನೆಗೊಳ್ಳಲು 20 ನಿಮಿಷ ಬಾಕಿ ಇರುವಾಗ ಸ್ಮಿತ್ ಔಟಾದರು.
ಮೆಕಲಮ್ 100: ನ್ಯೂಝಿಲೆಂಡ್‌ನ ಸ್ಟಾರ್ ದಾಂಡಿಗ ಬ್ರೆಂಡನ್ ಮೆಕಲಮ್ ಆಸ್ಟ್ರೇಲಿಯ ವಿರುದ್ಧ ಶುಕ್ರವಾರ 100ನೆ ಟೆಸ್ಟ್ ಪಂದ್ಯವನ್ನು ಆಡಿದರು. ಮೆಕಲಮ್ 100 ಟೆಸ್ಟ್ ಪಂದ್ಯ ಆಡಿರುವ ಕಿವೀಸ್‌ನ 3ನೆ ಆಟಗಾರ.
ಸಂಕ್ಷಿಪ್ತ ಸ್ಕೋರ್
ನ್ಯೂಝಿಲೆಂಡ್ ಮೊದಲ ಇನಿಂಗ್ಸ್:
48 ಓವರ್‌ಗಳಲ್ಲಿ 183 ರನ್‌ಗೆ ಆಲೌಟ್
(ಕ್ರೆಗ್ ಔಟಾಗದೆ 41, ಆ್ಯಂಡರ್ಸನ್ 38, ಹೇಝಲ್‌ವುಡ್ 4-42, ಸಿಡ್ಲ್ 3-37, ಲಿನ್ 3-32)
ಆಸ್ಟ್ರೇಲಿಯ ಮೊದಲ ಇನಿಂಗ್ಸ್:
40 ಓವರ್‌ಗಳಲ್ಲಿ 147/3
(ಸ್ಮಿತ್ 71, ಉಸ್ಮಾನ್ ಖ್ವಾಜಾ ಔಟಾಗದೆ 57, ಸೌಥಿ 2-22)







