ಸಿಯಾಚಿನ್ ಹಿಮದುರಂತ: 9 ಯೋಧರ ಮೃತದೇಹಗಳು ಮೂಲಶಿಬಿರಕ್ಕೆ

ಜಮ್ಮು,ಫೆ.13: ಸಿಯಾಚಿನ್ ನೀರ್ಗಲ್ಲು ಪ್ರದೇಶದಲ್ಲಿ ಫೆ.3ರಂದು ಸಂಭವಿಸಿದ್ದ ಹಿಮಪಾತಕ್ಕೆ ಸಿಲುಕಿ ಟನ್‌ಗಟ್ಟಲೆ ಹಿಮದಡಿ ಸಮಾಧಿಯಾಗಿದ್ದ ಕರ್ನಾಟಕದ ಇಬ್ಬರು ಸೇರಿದಂತೆ ಉಳಿದ ಒಂಬತ್ತು ಯೋಧರ ಮೃತದೇಹಗಳನ್ನು ಶನಿವಾರ ಲಡಾಖ್ ವಿಭಾಗದ ಸಿಯಾಚಿನ್ ಮೂಲಶಿಬಿರಕ್ಕೆ ತರಲಾಗಿದೆ.
ಈ ದುರಂತಕ್ಕೆ ಸಿಲುಕಿದ್ದ ಇನ್ನೋರ್ವ ಯೋಧ ಲಾನ್ಸ್ ನಾಯಕ್ ಹನುಮಂತಪ್ಪ ಕೊಪ್ಪದ ಆರು ದಿನಗಳ ಬಳಿಕ ಹಿಮರಾಶಿಯಲ್ಲಿ ಜೀವಂತವಾಗಿ ಪತ್ತೆಯಾಗಿದ್ದರೂ ದಿಲ್ಲಿಯ ಸೇನಾ ಆಸ್ಪತ್ರೆಯಲ್ಲಿ ಮೂರು ದಿನಗಳ ಜೀವನ್ಮರಣ ಹೋರಾಟದ ನಂತರ ಗುರುವಾರ ಕೊನೆಯುಸಿರೆಳೆದಿದ್ದು, ಶುಕ್ರವಾರ ಅವರ ಅಂತ್ಯಸಂಸ್ಕಾರವು ಕರ್ನಾಟಕದ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಸ್ವಗ್ರಾಮ ಬೆಟದೂರಿನಲ್ಲಿ ನಡೆದಿತ್ತು.
ಶನಿವಾರ ಹವಾಮಾನದಲ್ಲಿ ಕೊಂಚ ಸುಧಾರಣೆಯಾದ ಬಳಿಕ ಈ ಹುತಾತ್ಮ ಯೋಧರ ಮೃತದೇಹಗಳನ್ನು ಹೆಲಿಕಾಪ್ಟರ್‌ಗಳ ಮೂಲಕ ಮೂಲಶಿಬಿರಕ್ಕೆ ತರಲು ಸಾಧ್ಯವಾಗಿದೆ. ಅವುಗಳನ್ನು ಪಾರ್ಥಪುರ ಬಳಿಯ ಹುಂದೇರ್ ಸೇನಾ ಆಸ್ಪತ್ರೆಯಲ್ಲಿ ರಕ್ಷಿಸಿಡಲಾಗಿದ್ದು,ಹೆಲಿಕಾಪ್ಟರ್ ಕಾರ್ಯಾಚರಣೆಗೆ ಸೂಕ್ತ ಹವಾಮಾನ ಸ್ಥಿತಿ ನಿರ್ಮಾಣಗೊಂಡ ಬಳಿಕ ಲೇಹ್‌ಗೆ ಸಾಗಿಸಲಾಗುವುದು. ರವಿವಾರ ಶುಭ್ರ ವಾತಾವರಣವಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ ಎಂದು ಹಿರಿಯ ಸೇನಾಧಿಕಾರಿಯೋರ್ವರು ತಿಳಿಸಿದರು.







