ಸೇನಾ ನೇಮಕಾತಿ ಶಿಬಿರದಲ್ಲಿ 1,500 ಅಭ್ಯರ್ಥಿಗಳ ಬಳಿ ಮಾದಕ ವಸ್ತುಗಳು ಪತ್ತೆ!
ಆಗ್ರಾ, ಫೆ.13 : ದೇಶವು ಸಿಯಾಚಿನ್ ಹುತಾತ್ಮ ಹನುಮಂತಪ್ಪ ಕೊಪ್ಪದ ಅವರನ್ನು ನೆನೆದು ಶೋಕಿಸುತ್ತಿರುವಾಗಲೇ, ಮೈನ್‌ಪುರಿಯಲ್ಲಿ ಶುಕ್ರವಾರ ನಡೆದ ಸೇನಾ ನೇಮಕಾತಿ ಶಿಬಿರದಲ್ಲಿ ಭಾಗವಹಿಸಿದ್ದ ಉತ್ತರ ಪ್ರದೇಶದ ಸುಮಾರು 1,500ಕ್ಕೂ ಹಚ್ಚು ಯುವಕರು ಸ್ಟೆರಾಯ್ಡೆ, ಅಫೀಮು ಮುಂತಾದ ಶಕ್ತಿವರ್ಧಕ ಮಾದಕ ವಸ್ತುಗಳಿಗೆ ಮೊರೆ ಹೋಗಿರುವುದು ಪತ್ತೆಯಾಗಿದ್ದು ಹಲವರು ಗಜೆಟೆಡ್ ಅಧಿಕಾರಿಗಳ ನಕಲಿ ರಬ್ಬರ್ ಸ್ಟಾಂಪ್‌ಗಳನ್ನೂ ಹೊಂದಿದ್ದರೆಂದು ತಿಳಿದು ಬಂದಿದೆ. ಶಿಬಿರಕ್ಕೆ ಆಗಮಿಸಿದ್ದ 7,000 ಅಭ್ಯರ್ಥಿಗಳಲ್ಲಿ ಸುಮಾರು 1,500 ಅಭ್ಯರ್ಥಿಗಳ ಮೇಲೆ ಮೋಸದಿಂದ ನೇಮಕಾತಿ ಪಡೆಯಲು ಯತ್ನಿಸಿದ ಆರೋಪದ ಮೇಲೆ ನಿಷೇಧ ಹೇರಲಾಗಿದೆ. ಶಿಬಿರವು ಫೆಬ್ರವರಿ 20ರ ತನಕ ನಡೆಯಲಿದೆ.
ಅಭ್ಯರ್ಥಿಗಳ ನೋಂದಣಿ ಪ್ರಕ್ರಿಯೆಯ ಮೊದಲು ಅವರನ್ನು ತಪಾಸಣೆ ನಡೆಸುವಾಗ ಮಾದಕ ವಸ್ತುಗಳು ಹಾಗೂ ಇತರ ನಿಷೇಧಿತ ವಸ್ತುಗಳು ಪತ್ತೆಯಾಗಿದ್ದು ಅವುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸೇನಾ ನೇಮಕಾತಿ ಅಧಿಕಾರಿ ಕರ್ನಲ್. ಶ್ರೀಕಾಂತ್ ನಾರಾಯಣ್ ಹೇಳಿದ್ದಾರೆ.
ಸಾಧಾರಣವಾಗಿ ಸೇನಾ ಶಿಬಿರದಲ್ಲಿ ಉದ್ದೀಪನಾ ದ್ರವ್ಯ ಪರೀಕ್ಷೆಗಳು ನಡೆಯುವದಿಲ್ಲ. ಅಭ್ಯರ್ಥಿಗಳ ನೋಂದಣಿ ಹಾಗೂ ಅವರ ದೈಹಿಕ ಸಾಮರ್ಥ್ಯ ಪರೀಕ್ಷೆ ನಡೆಯುವ ಸಮಯದ ನಡುವೆ ಎರಡು ಗಂಟೆ ಅಂತರವಿದ್ದು ಈ ಸಮಯದಲ್ಲಿ ಅವರು ಉದ್ದೀಪನಾ ದ್ರವ್ಯ ಸೇವಿಸಿದ್ದರೂ ಅದರ ಪ್ರಭಾವ ಕುಂಠಿತವಾಗಿರುತ್ತದೆ,’ ಎಂದು ಅವರು ಹೇಳಿದರು.
‘‘ಕೆಲವರಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ರಬ್ಬರ್ ಸ್ಟಾಂಪ್ ಕೂಡ ಪತ್ತೆಯಾಗಿದ್ದು ಇದನ್ನು ಅವರು ತಂದಿರುವ ದಾಖಲೆಗಳನ್ನು ದೃಢೀಕರಿಸಲು ಅವರು ಉಪಯೋಗಿಸಿರುವ ಸಾಧ್ಯತೆಯಿದೆ,’’ಎಂದೂ ಕರ್ನಲ್. ನಾರಾಯಣ್ ಹೇಳಿದರು.
ಒಟ್ಟು ಎಷ್ಟು ಮಂದಿ ಅಭ್ಯರ್ಥಿಗಳಲ್ಲಿ ಮಾದಕ ದ್ರವ್ಯಗಳು ಪತ್ತೆಯಾದವು ಎಂದು ತಿಳಿಸಲು ನಿರಾಕರಿಸಿದ ಅವರು ಅಂತಹ ಅಭ್ಯರ್ಥಿಗಳ ಸಂಖ್ಯೆ ಸಾಕಷ್ಟು ದೊಡ್ಡದಿದೆ ಎಂದು ಹೇಳಿದರು. ನಿಷೇಧಿತ ಅಭ್ಯರ್ಥಿಗಳ ಸಂಖ್ಯೆ 2,000 ದಷ್ಟಾಗಿರಬಹುದೆಂದು ಸೇನಾ ಮೂಲಗಳು ತಿಳಿಸಿವೆ.







