ಸ್ನಾಪ್ ಡೀಲ್ ಉದ್ಯೋಗಿ ದೀಪ್ತಿ ಅಪಹರಣ ಸುತ್ತ ರಹಸ್ಯದ ಹುತ್ತ

ಗಾಝಿಯಾಬಾದ್, ಫೆ.13: ಸ್ನ್ಯಾಪ್ ಡೀಲ್ ಉದ್ಯೋಗಿ ದೀಪ್ತಿ ಸಾರ್ನಾ ಅಪಹರಣ ಹಾಗೂ ಬಿಡುಗಡೆ ಪ್ರಕರಣ ಇನ್ನೂ ರಹಸ್ಯವಾಗಿಯೇ ಉಳಿದಿದ್ದು ಪೊಲೀಸರು 24ರ ಹರೆಯದ ದೀಪ್ತಿ ವಿವರಿಸಿರುವ ‘ವಿಚಿತ್ರ ಘಟನೆ’ಗಳ ಸುತ್ತ ತಮ್ಮ ತನಿಖೆ ಕೇಂದ್ರೀಕರಿಸಿದ್ದಾರೆ.
ಬುಧವಾರ ಸಂಜೆ ಆಕೆ ತನ್ನ ಕಚೇರಿಯಿಂದ ಆಟೋರಿಕ್ಷಾವೊಂದರಲ್ಲಿ ಗಾಝಿಯಾಬಾದ್‌ಗೆ ಮರಳುತ್ತಿದ್ದ ಸಂದರ್ಭ ಆಟೋ ಚಾಲಕ ಆಕೆಯನ್ನು ಮತ್ತೆಲ್ಲಿಗೋ ಕರೆದೊಯ್ದಿದ್ದನೆಂದು ನಂಬಲಾಗಿತ್ತು. ಆದರೆ ಶುಕ್ರವಾರ ಬೆಳಿಗ್ಗೆ ಮನೆಗೆ ಮರಳಿದ ದೀಪ್ತಿ ತನ್ನನ್ನು ನಾಲ್ಕು ವ್ಯಕ್ತಿಗಳು 36 ಗಂಟೆಗಳ ಮೊದಲು ಅಪಹರಿಸಿದ್ದಾಗಿಯೂ ನಂತರ ಬಿಡುಗಡೆಗೊಳಿಸಿ ರೈಲ್ವೇ ನಿಲ್ದಾಣದಲ್ಲಿ ಬಿಟ್ಟರೆಂದೂ ಹೇಳಿದ್ದಳು. ‘‘ನಾವು ಆಕೆಯ ಹೇಳಿಕೆಗಳನ್ನು ನಿರಾಕರಿಸುವುದಿಲ್ಲವಾದರೂ ಅದಕ್ಕೆ ಸೂಕ್ತ ಸಾಕ್ಷಿಗಳನ್ನು ಹುಡುಕುತ್ತಿದ್ದೇವೆ,ಎಂದು ಗಾಝಿಯಾಬಾದಿನ ಹಿರಿಯ ಸುಪರಿಂಟೆಂಡೆಂಟ್ ಆಫ್ ಪೊಲೀಸ್ ಧರ್ಮೇಂದ್ರ ಸಿಂಗ್ ಹೇಳಿದ್ದಾರೆ.
ದೀಪ್ತಿ ಪೊಲೀಸರಿಗೆ ನೀಡಿದ ಹೇಳಿಕೆಯ ಪ್ರಕಾರ ಆಕೆಯನ್ನು ಮೊದಲು ಐ-10 ಕಾರೊಂದರಲ್ಲಿ ಕರೆದೊಯ್ಯಲಾಗಿದ್ದು, ನಂತರ ದೂರದೂರದ ತನಕ ನಡೆಯುವಂತೆ ಮಾಡಲಾಗಿದ್ದು ಒಂದು ದಿನ ಕಬ್ಬಿನ ತೋಟದಲ್ಲಿ ನೆಲೆಸುವಂತೆಯೂ ಮಾಡಲಾಗಿತ್ತು. ನಂತರ ತನ್ನನ್ನು ಅಪಹರಣಕಾರರು ನರೇಲಾ ರೈಲ್ವೇ ನಿಲ್ದಾಣದಲ್ಲಿ ಬಿಟ್ಟು ಹೋದರೆಂದೂ ಆಕೆ ಹೇಳಿದ್ದಳು.
ಫೆಬ್ರವರಿ 10ರಂದು ತನ್ನ ಗುರ್ಗಾಂವ್ ಕಚೇರಿಯಿಂದ ದೀಪ್ತಿ ಹೊರಬಿದ್ದ ನಂತರ ವೈಶಾಲಿ ಮೆಟ್ರೊ ಸ್ಟೇಶನ್‌ನಲ್ಲಿ ಹಲವರೊಂದಿಗೆ ಆಟೊ ಏರಿದ್ದಳು, ಆದರೆ ದಾರಿ ಮಧ್ಯೆ ಮೋಹನ್ ನಗರದಲ್ಲಿ ಆಟೋ ಕೈಕೊಟ್ಟಾಗ ಪ್ರಯಾಣಿಕರು ಇನ್ನೊಂದು ಆಟೊ ಹಿಡಿದು ಗಾಝಿಯಾಬಾದಿನ ಹಳೆ ಬಸ್ ನಿಲ್ದಾಣದತ್ತ ತೆರಳಿದ್ದಳು. ಆದರೆ ಹಲವು ನಿಮಿಷಗಳ ತರುವಾಯ ಆಟೋದಲ್ಲಿದ್ದ ಇನ್ನೊಬ್ಬ ಪ್ರಯಾಣಿಕೆಯನ್ನು ಚೂರಿ ತೋರಿಸಿ ಇಳಿಯುವಂತೆ ಮೂವರು ಆಗಂತುಕರು ಮಾಡಿದರು ಎಂದು ದೀಪ್ತಿ ಪೊಲೀಸರಿಗೆ ತಿಳಿಸಿದ್ದಾಳೆ. ಆ ವ್ಯಕ್ತಿಗಳು ದೀಪ್ತಿಯ ಬ್ಯಾಗ್, ಮೊಬೈಲನ್ನು ಸೆಳೆದಾಗ ಆಕೆ ಗೆಳತಿಗೆ ಫೋನ್ ಮಾಡುತ್ತಿದ್ದಳು ಹಾಗೂ ಆ ಗೆಳತಿ ಆಕೆಯ ಕಿರುಚಾಟವನ್ನು ಮೊಬೈಲಿನಲ್ಲಿ ಕೇಳಿಸಿಕೊಂಡಿದ್ದಾಳೆನ್ನಲಾಗಿದೆ.
‘‘ಆಕೆಯ ಅಪಹರಣಕಾರರಿಗೆ ಆಕೆ ಯಾರನ್ನೋ ಭೇಟಿಯಾಗಬೇಕಿತ್ತು ಎಂದು ದೀಪ್ತಿ ಹೇಳಿಕೊಂಡಿದ್ದಾಳೆ. ತಾನು ಇಷ್ಟ ಪಡುವ ಚಿಪ್ಸ್ ಬ್ರ್ಯಾಂಡ್ ಕೂಡ ಗೊತ್ತೆಂದು ಅಪಹರಣಕಾರರು ಹೇಳಿದ್ದರೆಂದು ಆಕೆ ಹೇಳಿದ್ದಾಳೆ. ಆಕೆಗೆ ವಿಶ್ರಾಂತಿ ಬೇಕಿದ್ದರಿಂದ ನಾವು ಆಕೆಯನ್ನು ಹೆಚ್ಚಿನವಿಚಾರಣೆಗೆ ಒಳಪಡಿಸಿಲ್ಲ,’’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
‘‘ದೀಪ್ತಿಯನ್ನು ಜಿಲ್ಲಾ ಆಸ್ಪತ್ರೆಗೆ ವೈದ್ಯಕೀಯ ತಪಾಸಣೆಗೆ ಕರೆದೊಯ್ಯಲಾಗಿತ್ತಾದರೂ ಆಕೆ ಕೇವಲ ಬಾಹ್ಯ ಪರೀಕ್ಷೆಗೆ ಒಪ್ಪಿಕೊಂಡಳು ಆದರೆ ಆಕೆಯ ಮೈ ಮೇಲೆ ಯಾವುದೇ ಗಾಯಗಳಿರಲಿಲ್ಲ,’’ಎಂದು ಅವರು ಹೇಳಿದ್ದಾರೆ.
ಮಾಧ್ಯಮದವರು ದೀಪ್ತಿಯನ್ನು ಭೇಟಿ ಮಾಡಲು ಆಕೆಯ ಕುಟುಂಬ ನಿರಾಕರಿಸಿದೆ.







