ಐಎನ್‌ಎಸ್ ವಿರಾಟ್ ಕೊನೆಯ ಪಯಣ

ಹೊಸದಿಲ್ಲಿ, ಫೆ.13: ಭಾರತದ ವಿಮಾನ ವಾಹಕ ನೌಕೆ ಐಎನ್‌ಎಸ್ ವಿರಾಟ್ ಜಲ ಸೇನೆಯಿಂದ ನಿವೃತ್ತಿ ಪಡೆಯಲು ಸಿದ್ಧವಾಗಿದ್ದು, ತನ್ನ ಬೀಳ್ಕೊಡುಗೆ ಯಾತ್ರೆಗೆ ಹೊರಟಿದೆ. ಶೀಘ್ರವೇ ಅದನ್ನು ವಾಸ್ತವ್ಯ ಕೊಠಡಿಗಳು ಸೇರಿದಂತೆ ಸಾಹಸ ಪ್ರವಾಸೋದ್ಯಮ ಕೇಂದ್ರವಾಗಿ ಅಭಿವೃದ್ಧಿಯಾಗಲಿದೆ.
ಕಾರ್ಯಾಚರಣೆಯಲ್ಲಿರುವ ವಿಶ್ವದ ಅತ್ಯಂತ ಹಳೆಯ ವಿಮಾನ ವಾಹಕ ನೌಕೆ ಮೊದಲ ಬಾರಿಗೆ ಒಡಿಶಾದ ಪಾರಾದೀಪ್ ಬಂದರಿಗೆ ತಲುಪಿದೆ. ಅದು ತನ್ನೊಡಲಲ್ಲಿ ಎಸಿಸಿ ಕೆಡೆಟ್‌ಗಳಿಗೆ ಆತಿಥ್ಯ ನೀಡಿದೆ.
ಹಡಗು ಮುಂದೆ ಕಾಕಿನಾಡ ಬಂದರು, ಬಳಿಕ ಚೆನ್ನೈ ಹಾಗೂ ಅಂತಿಮವಾಗಿ ಮುಂಬೈ ತಲುಪಲಿದೆ.
ಮುಂಬೈಯಲ್ಲಿ ಹಡಗಿನ ಕಾರ್ಯಾಚರಣಾ ವರ್ತುಲವು ಕೊನೆಗೊಳ್ಳಲಿದೆಯೆಂದು ಜಲ ಸೇನಾ ಮೂಲಗಳು ತಿಳಿಸಿವೆ.
ವಿಮಾನ ವಾಹಕ ನೌಕೆಯನ್ನು ಪ್ರವಾಸಿ ಕೇಂದ್ರವನ್ನಾಗಿ ಅಭಿವೃದ್ಧಿ ಪಡಿಸುವ ಪ್ರಸ್ತಾವವೊಂದು ರಕ್ಷಣಾ ಸಚಿವಾಲಯದಲ್ಲಿದೆಯೆಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಇತ್ತೀಚೆಗೆ ಹೇಳಿದ್ದರು.
ಸುಮಾರು 6 ದಶಕಗಳ ಕಾಲ ಸೇವೆ ಸಲ್ಲಿಸಿರುವ ಯುದ್ಧ ಹಡಗಿನಲ್ಲಿ ಪ್ರವಾಸೋದ್ಯಮ ಸಂಬಂಧಿ ಚಟುವಟಿಕೆಗಳನ್ನು ಆಂಧ್ರಪ್ರದೇಶ ಸರಕಾರ, ಭಾರತೀಯ ಜನ ಸೇವೆ ಹಾಗೂ ಖಾಸಗಿ ಸಂಘಟನೆಯೊಂದರ ಜಂಟಿ ಸಹಭಾಗಿತ್ವದಲ್ಲಿ ಕೈಗೆತ್ತಿಕೊಳ್ಳಲಾಗುವುದೆಂದು ಅವರು ತಿಳಿಸಿದ್ದರು.
ಈ ಚಟುವಟಿಕೆಗಳಲ್ಲಿ ಯಾಚಿಂಗ್, ಸಮುದ್ರ ಕ್ರೀಡೆಗಳು, ಸೈಲಿಂಗ್, ಗ್ಲೈಡಿಂಗ್, ಕ್ರೂಯಿಸಿಂಗ್‌ಗಳು ಸೇರಿವೆಯೆಂದು ವಿವರಿಸಿದ್ದ ನಾಯ್ಡು, ನೌಕೆಯ 1,500 ಕೊಠಡಿಗಳನ್ನು ಪ್ರವಾಸಿಗರ ವಸತಿಗೆ ಬಳಸಬಹುದು ಎಂದಿದ್ದರು.
ಭಾರತವು ಖರೀದಿಸುವ ಮುನ್ನ ನೌಕೆಯ 30 ವರ್ಷಗಳಿಗೂ ಹೆಚ್ಚು ಕಾಲ ಬ್ರಿಟಿಷ್ ನೌಕಾ ಪಡೆಯಲ್ಲಿ ಸೇವೆ ಸಲ್ಲಿಸಿತ್ತು. ವ್ಯಾಪಕ ದುರಸ್ತಿಯ ಬಳಿಕ, 1987ರಲ್ಲಿ ಅದನ್ನು ಭಾರತೀಯ ನೌಕಾಪಡೆಗೆ ಸೇರಿಸಲಾಗಿತ್ತು.
ಫಾಕ್ಲಾಂಡ್ ಯುದ್ಧದಲ್ಲಿ ಭಾಗವಹಿಸಿದ್ದ ಹಾಗೂ ದಶಕಕ್ಕೂ ಹೆಚ್ಚು ಕಾಲ ಭಾರತದ ಏಕೈಕ ವಿಮಾನ ವಾಹಕ ನೌಕೆಯಾಗಿದ್ದ ಐಎನ್‌ಎಸ್ ವಿರಾಟ್, ಕಳೆದ ವಾರ ವಿಶಾಖಪಟ್ಟಣದಲ್ಲಿ ನಡೆದಿದ್ದ ಅಂತಾರಾಷ್ಟ್ರೀಯ ನೌಕಾಪಡೆ ಹಡಗುಗಳ ಪರಿಶೀಲನೆಯಲ್ಲಿ ಭಾಗವಹಿಸಿತ್ತು.
1997ರಲ್ಲಿ ನಿವೃತ್ತಿಯ ಬಳಿಕ ಸಾಗರ ಮ್ಯೂಸಿಯಂ ಆಗಿ ಪರಿವರ್ತಿಸಲಾಗಿದ್ದ ಭಾರತದ ಮೊದಲ ವಿಮಾನ ವಾಹಕ ನೌಕೆ ವಿಕ್ರಾಂತ್‌ನ ಉಸ್ತುವಾರಿ ಖರ್ಚು ದುಬಾರಿಯಾಗುತ್ತಿದೆಯೆಂಬ ಕಾರಣದಿಂದ ಅದನ್ನು ಒಡೆಯಲಾಯಿತು. ಜಲಸೇನೆ ಅದರಿಂದ ಸಾಕಷ್ಟು ಪಾಠ ಕಲಿತಿದೆ.
ಈ ಕ್ರಮವು ವ್ಯಾಪಕ ಖಂಡನೆಗೆ ಗುರಿಯಾಗಿತ್ತು. ಅನೇಕ ಹಿರಿಯ ಹಾಗೂ ಮಿಲಟರಿ ಚರಿತ್ರಕಾರರು ತಮ್ಮ ಕಳವಳ ವ್ಯಕ್ತಪಡಿಸಿದ್ದರು.
ವಿಕ್ರಾಂತ್, 16 ಸೀಹ್ಯಾರಿಯರ್ಸ್ ಹಾಗೂ ಸೀಕಿಂಗ್, ಚೇತಕ್‌ಗಳಂತಹ ಹೆಲಿಕಾಪ್ಟರ್‌ಗಳು ಸೇರಿ 26 ಯುದ್ಧ ವಿಮಾನಗಳನ್ನು ಹೊರುವ ಸಾಮರ್ಥ್ಯ ಹೊಂದಿತ್ತು.







