ಉಸ್ಮಾನಿಯಾ ವಿವಿ: ಎಐಎಸ್‌ಎಫ್-ಎಬಿವಿಪಿ ಚಕಮಕಿ; 14 ವಿದ್ಯಾರ್ಥಿಗಳ ಬಂಧನ
ಹೊಸದಿಲ್ಲಿ,ಫೆ.13: ದಿಲ್ಲಿಯ ಜೆಎನ್‌ಯು ವಿವಿಯ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಕನ್ಹಯ್ಯಾ ಕುಮಾರ್ ಅವರ ಬಂಧನ ವಿರೋಧಿಸಿ ಹೈದರಾಬಾದ್‌ನ ಉಸ್ಮಾನಿಯಾ ವಿವಿಯಲ್ಲಿ ಪ್ರತಿಭಟನೆ ನಡೆಸುವ ಕುರಿತಾಗಿ ಎಐಎಸ್‌ಎಫ್ ಹಾಗೂ ಎಬಿವಿಪಿ ಸಂಘಟನೆಗಳ ನಡುವೆ ತೀವ್ರ ವಾಗ್ವಾದ ನಡೆದ ಬಳಿಕ ಪೊಲೀಸರು ಮುಂಜಾಗರೂಕತಾ ಕ್ರಮವಾಗಿ ಎರಡೂ ವಿದ್ಯಾರ್ಥಿ ಸಂಘಟನೆಗಳ ಕನಿಷ್ಠ 14 ಮಂದಿ ಕಾರ್ಯಕರ್ತರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಕನ್ಹಯ್ಯ ಕುಮಾರ್ ಬಂಧನವನ್ನು ಪ್ರತಿಭಟಿಸಿ ಶನಿವಾರ ಎಐಎಸ್‌ಎಫ್ ಕಾರ್ಯಕರ್ತರು, ಹೈದರಾಬಾದ್‌ನ ಆರ್ಟ್ಸ್ ಕಾಲೇಜ್‌ನ ಮುಂಭಾಗದಲ್ಲಿ ಕೇಂದ್ರ ಸರಕಾರದ ಪ್ರತಿಕೃತಿಯನ್ನು ದಹಿಸಿದರು. ಕನ್ಹಯ್ಯ್ ಕುಮಾರ್‌ರನ್ನು ಬಿಡುಗಡೆಗೊಳಿಸಬೇಕು ಹಾಗೂ ಅವರ ವಿರುದ್ಧದ ದೇಶದ್ರೋಹದ ಆರೋಪವನ್ನು ಕೈಬಿಡಬೇಕೆಂದು ಪ್ರತಿಭಟನಾನಿರತರು ಆಗ್ರಹಿಸಿದ್ದರು.
ಆದರೆ ಎಐಎಸ್‌ಎಫ್‌ನ ಪ್ರತಿಭಟನೆಗೆ ಎಬಿವಿಪಿ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದಾಗ, ಎರಡೂ ಗುಂಪುಗಳ ನಡುವೆ ಮಾತಿನ ಚಕಮಕಿ ನಡೆಯಿತು.ಪರಿಸ್ಥಿತಿ ವಿಕೋಪಕ್ಕೆ ತಿರುಗುವ ಮುನ್ನ ಪೊಲೀಸರು ಆಗಮಿಸಿ, ವಾಗ್ವಾದ ನಿರತ ವಿದ್ಯಾರ್ಥಿಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡರು.ಮುಂಜಾಗರೂಕತಾ ಕ್ರಮವಾಗಿ ಎಬಿವಿಪಿಯ 10 ಮಂದಿ ಹಾಗೂ ಎಐಎಸ್‌ಎಫ್‌ನ ನಾಲ್ವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.





