ಎಂ.ಎಸ್.ರುದ್ರೇಶ್ವರಸ್ವಾಮಿಗೆ ಮುದ್ದಣ ಕಾವ್ಯ ಪ್ರಶಸ್ತಿ ಪ್ರದಾನ

ಮೂಡುಬಿದಿರೆ, ಫೆ.14: ಕಾಂತಾವರ ಕನ್ನಡ ಸಂಘದ ವತಿಯಿಂದ ನೀಡುವ 2015ರ ಸಾಲಿನ 41ನೆ ಮುದ್ದಣ ಕಾವ್ಯ ಪ್ರಶಸ್ತಿಯನ್ನು ಬೆಂಗಳೂರಿನ ಎಂ.ಎಸ್.ರುದ್ರೇಶ ಸ್ವಾಮಿಯವರಿಗೆ ಮೂಡುಬಿದಿರೆಯ ಕನ್ನಡ ಭವನದಲ್ಲಿ ನಡೆದ ಮುದ್ದಣ ಸಾಹಿತ್ಯೋತ್ಸವ-2016 ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ರುದ್ರೇಶಸ್ವಾಮಿ, ವರಕವಿ ಮುದ್ದಣ ಹಳೆಗನ್ನಡ ಮತ್ತು ಹೊಸಗನ್ನಡದ ನಡುವಿನ ಬೆಸುಗೆಯ ಕೊಂಡಿಯಾಗಿದ್ದರು. ಕಾವ್ಯಲೋಕದಲ್ಲಿ ಗುರುತಿಸಿ ಭವಿಷ್ಯದಲ್ಲಿ ಉತ್ತಮ ಕಾವ್ಯರಚಿಸುವ ರವಸೆಯೊಂದಿಗೆ ತಮ್ಮ ’ಅವಳ ಕವಿತೆ’ ಕವನ ಸಂಕಲನ ಹಸ್ತಪ್ರತಿಗೆ ನೀಡಲಾದ ಗೌರವ ಖುಷಿ ನೀಡಿದೆ ಎಂದರು. ಪ್ರಶಸ್ತಿಯು ಹತ್ತು ಸಾವಿರ ರೂ. ನಗದು, ತಾಮ್ರಪತ್ರದೊಂದಿಗೆ ಶಾಲು, ಗಾಂಧಿಹಾರ ಸಹಿತ ಸ್ಮರಣಿಕೆಯನ್ನು ಒಳಗೊಂಡಿತ್ತು.
ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಧರ್ಮದರ್ಶಿ ಹರಿಕೃಷ್ಣ ಪುನರೂರು, ಆಂಗ್ಲ ಮಾಧ್ಯಮದ ಅಬ್ಬರದ ನಡುವೆ ಕನ್ನಡ ಪುಸ್ತಕಗಳು ಮಾರಾಟವಾಗುತ್ತಿವೆ. ಆದರೆ ಕೊಂಡು ಓದುವವರಿಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಮಾಜಕ್ಕೆ ಕೊಡುಗೆ ನೀಡುವವರನ್ನು ನಾವು ಗುರುತಿಸಿ ಗೌರವಿಸಬೇಕು. ಸತ್ಕಾರ್ಯಗಳನ್ನು ಪ್ರೋತ್ಸಾಹಿಸಬೇಕು ಎಂದರು.
ಮಂಗಳೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗದ ನಿರ್ದೇಶಕ ಪ್ರೊ. ಶ್ರೀಪತಿ ಕಲ್ಲೂರಾಯ ಸಮಾರಂಭವನ್ನು ಉದ್ಘಾಟಿಸಿ ಪ್ರಶಸ್ತಿ ವಿಜೇತ ಕವನ ಸಂಕಲವನ್ನು ಅನಾವರಣಗೊಳಿಸಿದರು. ಕನ್ನಡ ಸಂಘದ ಕಾರ್ಯದರ್ಶಿ ಸದಾನಂದ ನಾರಾವಿ ಸ್ವಾಗತಿಸಿ, ಸಮ್ಮಾನಪತ್ರ ವಾಚಿಸಿದರು. ಸಂಘದ ಕಾರ್ಯಾಧ್ಯಕ್ಷ ಡಾ.ನಾ.ಮೊಗಸಾಲೆ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಸರೋಜಿನಿ ನಾಗಪ್ಪಯ್ಯ ಕಾರ್ಯಕ್ರಮ ನಿರ್ವಹಿಸಿದರು. ಕಲ್ಲೂರು ನಾಗೇಶ್ ವಂದಿಸಿದರು. ಸಂಘದ ವಾರ್ಷಿಕ ಗೌರವ ಪುರಸ್ಕಾರಕ್ಕೆ ಪಾತ್ರರಾದ ಮಹಾವೀರ ಪಾಂಡಿ ಕಾಂತಾವರ, ಮತ್ತು ಪುತ್ತೂರಿನ ಪ್ರಕಾಶ್ ಕೊಡೆಂಕಿರಿ ಉಪಸ್ಥಿತರಿದ್ದರು. ಸತೀಶ್ ಕುಮಾರ್ ಕೆಮ್ಮಣ್ಣು ಗಮಕ ಕಾವ್ಯವಾಚನಗೈದರು.







