ಮೂಡುಬಿದಿರೆ: ಬಿಜೆಪಿ ಅಭ್ಯರ್ಥಿಪರ ಕೋಟ ಪ್ರಚಾರ

ಮೂಡುಬಿದಿರೆ: ಪುತ್ತಿಗೆ ಜಿ.ಪಂ ವ್ಯಾಪ್ತಿಯ ಹೊಸಬೆಟ್ಟು, ಇರುವೈಲು ಪ್ರದೇಶದಲ್ಲಿ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅಭ್ಯರ್ಥಿಗಳ ಪರ ಭಾನುವಾರ ಮತಯಾಚನೆ ಮಾಡಿದರು.
ಬಳಿಕ ಕಾರ್ಯಕರ್ತರೊಂದಿಗೆ ಮಾತನಾಡಿ, ಗ್ರಾಮೀಣ ಪ್ರದೇಶದ ಅಭಿವೃದ್ಧಿ ಮಾಡುವಲ್ಲಿ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಬಿಜೆಪಿ ಆಡಳಿತದ ಅವಧಿಯಲ್ಲಿ ಜಾರಿಗೆ ತಂದ ಜನಪರ ಯೋಜನೆಗಳ ಕುರಿತು ಕಾಂಗ್ರೆಸ್ ಸರ್ಕಾರ ಜನರಲ್ಲಿ ಗೊಂದಲ ಸೃಷ್ಠಿಸುತ್ತಿದೆ. 94ಸಿ ಹಾಗೂ ಕುಮ್ಕಿ ಹಕ್ಕು ಇದಕ್ಕೆ ಸ್ಪಷ್ಟ ನಿದರ್ಶನ. ಕಾಂಗ್ರೆಸ್‌ನ ಇಂತಹ ಜನವಿರೋಧಿ ನೀತಿಗಳಿಂದಾಗಿ ಮತದಾರರು ಬಿಜೆಪಿಯತ್ತ ಒಲವು ಮಾಡಿದ್ದಾರೆ. ಕಾರ್ಯಕರ್ತರು ಸಂಘಟಿತರಾಗಿ ಪ್ರಚಾರ ಕಾರ್ಯದಲ್ಲಿ ಪಾಲ್ಗೊಳ್ಳಬೇಕು ಎಂದರು.
ಪುತ್ತಿಗೆ ಜಿ.ಪಂ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಪಿ ಸುಚರಿತ ಶೆಟ್ಟಿ ಮಾತನಾಡಿ, ಕಳೆದ ಎರಡು ಅವಧಿಯಲ್ಲಿ ಬಿಜೆಪಿ ಅಭಿವೃದ್ದಿಗೆ ದುಡಿದಿದೆ. ಕಾರ್ಯಕರ್ತರ ಪರಿಶ್ರಮ, ಮತದಾರರ ಪ್ರೀತಿಯಿಂದ ಗೆಲುವು ಖಂಡಿತ ಎಂದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೆ.ಪಿ ಜಗದೀಶ್ ಅಧಿಕಾರಿ, ಸುದರ್ಶನ್ ಎಂ, ಪುತ್ತಿಗೆ ಶಕ್ತಿಕೇಂದ್ರದ ಸಂಚಾಲಕ ಅಜಯ್ ರೈ, ಪುರಸಭಾ ಸದಸ್ಯರಾದ ಬಾಹುಬಲಿ ಪ್ರಸಾದ್, ನಾಗರಾಜ್ ಪೂಜಾರಿ, ಪ್ರಸಾದ್ ಕುಮಾರ್, ಇರುವೈಲ್ ಗ್ರಾ.ಪಂ ಸದಸ್ಯರ ಕುಸುಮ ನಾಯ್ಕಾ, ಮೋಹಿನಿ,ನಳಿನಾಕ್ಷಿ ಬಿಜೆಪಿ ಮುಖಂಡ ಗೋಪಾಲ ಶೆಟ್ಟಿಗಾರ ಮೊದಲಾವರು ಉಪಸ್ಥಿತರಿದ್ದರು.







