ಜೆಎನ್‌ಯು ವಿವಾದ ಮೋದಿಯಿಂದ ಪೊಲೀಸ್ ಭಯೋತ್ಪಾದನೆ: ಕೇಜ್ರಿವಾಲ್

ಹೊಸದಿಲ್ಲಿ, ಫೆ.14: ಪ್ರಧಾನಿ ನರೇಂದ್ರ ಮೋದಿ ಪೊಲೀಸರನ್ನು ಉಪಯೋಗಿಸಿಕೊಂಡು ‘ಪ್ರತಿಯೊಬ್ಬರಿಗೂ ಭಯ ಹುಟ್ಟಿಸುತ್ತಿದ್ದಾರೆ’ ಎಂದು ಜೆಎನ್‌ಯು ವಿವಾದದ ನಡುವೆಯೇ ದಿಲ್ಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಆರೋಪಿಸಿದ್ದಾರೆ.
ಆದಾಗ್ಯೂ, ದೇಶ ವಿರೋಧಿ ಚಟುವಟಿಕೆಗಳನ್ನು ಯಾವುದೇ ಸಂದರ್ಭದಲ್ಲಿ ಸಹಿಸಬಾರದು. ತಪ್ಪಿತಸ್ಥರನ್ನು ಗುರುತಿಸಿ ಶಿಕ್ಷೆ ವಿಧಿಸಬೇಕೆಂದು ಅವರು ಇದೇ ವೇಳೆ ಒತ್ತಿ ಹೇಳಿದ್ದಾರೆ. ಕೇಜ್ರಿವಾಲರ ಎಎಪಿ ದಿಲ್ಲಿ ಪೊಲೀಸರ ವಿರುದ್ಧವೂ ವಾಗ್ದಾಳಿ ನಡೆಸಿದ್ದು, ಜೆಎನ್‌ಯುನಲ್ಲಿ ಮುಂದುವರಿದಿರುವ ವಿವಾದದ ಕುರಿತು ಪೊಲೀಸರು ‘ಸರ್ವಾಧಿಕಾರದ ಕ್ರಮಗಳನ್ನು ಕೈಗೊಳ್ಳುವ ಮೂಲಕ, ವಿವಿಯ ವಿದ್ಯಾರ್ಥಿಗಳು ಹಾಗೂ ಪ್ರೊಫೆಸರರಿಗೆ ಕಿರುಕುಳ ನೀಡುತ್ತಿದ್ದಾರೆಂದು ದೂರಿದೆ.
ಇಡೀ ಘಟನೆಯು ಬಿಜೆಪಿ ನೇತೃತ್ವದ ಸರಕಾರದ ವಿದ್ಯಾರ್ಥಿ ವಿರೋಧಿ ಮುಖವನ್ನು ಬಹಿರಂಗಪಡಿಸಿದೆಯೆಂದು ಪಕ್ಷ ಹೇಳಿದೆ. ಪೊಲೀಸರನ್ನು ಉಪಯೋಗಿಸಿಕೊಂಡು ಪ್ರತಿಯೊಬ್ಬರಲ್ಲಿ ಭಯ ಹುಟ್ಟಿಸಲು ಮೋದಿಜಿ ಬಯಸಿದ್ದಾರೆಂದು ಕೇಜ್ರಿವಾಲ್ ಆರೋಪಿಸಿದ್ದಾರೆ. ದೇಶ ವಿರೋಧಿ ಶಕ್ತಿಗಳನ್ನು ಯಾರೂ ಬೆಂಬಲಿಸುವುದಿಲ್ಲ. ಆದರೆ, ಅದರ ನೆಪದಲ್ಲಿ ಅಮಾಯಕ ವಿದ್ಯಾರ್ಥಿಗಳನ್ನು ಗುರಿಯಿರಿಸುವುದು ಮೋದಿ ಸರಕಾರಕ್ಕೆ ಅತ್ಯಂತ ದುಬಾರಿಯೆಂದು ಸಾಬೀತಾಗಲಿದೆ ಎಂದವರು ಹೇಳಿದ್ದಾರೆ.
ಬಿಜೆಪಿಯ ವಿದ್ಯಾರ್ಥಿ ಘಟಕವಾದ ಎಬಿವಿಪಿ ಪಿತೂರಿಯಲ್ಲಿ ಒಳಗೊಂಡಿದೆಯೆಂದು ಆರೋಪಿಸಿರುವ ಎಎಪಿ, ಪಾಕಿಸ್ತಾನ್ ಜಿಂದಾಬಾದ್ ಮತ್ತಿತರ ದೇಶ ವಿರೋಧಿ ಘೋಷಣೆಗಳನ್ನು ಕೂಗಿದವರ ವಿರುದ್ಧ ಕ್ರಮ ಗೊಳ್ಳುವಂತೆ ಆಗ್ರಹಿಸಿದೆ. ಆದಾಗ್ಯೂ, ಈ ಘಟನೆಯನ್ನು ವಿದ್ಯಾರ್ಥಿಗಳು ಹಾಗೂ ಪ್ರೊಫೆಸರರನ್ನು ಗುರಿಯಿರಿಸಲು ಬಳಸಲಾಗುತ್ತಿದೆಯೆಂದು ಅದು ದೂರಿದೆ. ಜೆಎನ್‌ಯು ವಿದ್ಯಾರ್ಥಿಗಳು ಹಾಗೂ ಪ್ರೊಫೆಸರರಿಗೆ ಕಿರುಕುಳ ನೀಡಲು ದಿಲ್ಲಿ ಪೊಲೀಸರು ಉಪಯೊಗಿಸುತ್ತಿರುವ ಸರ್ವಾಧಿಕಾರಿ ಕ್ರಮಗಳನ್ನು ಎಎಪಿ ಖಂಡಿಸುತ್ತದೆ. ಪಿತೂರಿಯಲ್ಲಿ ಎಬಿವಿಪಿಯ ಪಾತ್ರವಿರುವುದನ್ನು ಸಂಪೂರ್ಣ ಘಟನೆಯ ವೇಳೆಯ ಕೆಲವು ವಿಚಾರಗಳಿಂದ ಬೆಳಕಿಗೆ ಬಂದಿದೆ. ಮೊದಲು ಎಫ್‌ಟಿಐಐ, ಮತ್ತೆ ರೋಹಿತ್ ವೇಮುಲಾ, ಈಗ ಜೆಎನ್‌ಯು. ಇದು ಸರಕಾರದ ವಿದ್ಯಾರ್ಥಿ ವಿರೋಧಿ ಮುಖವನ್ನು ಬಹಿರಂಗಪಡಿಸಿದೆ. ಮೋದಿಜಿ ವಿದ್ಯಾರ್ಥಿಗಳ ದಮನವನ್ನು ನಿಲ್ಲಿಸಬೇಕೆಂದು ಎಎಪಿ ಆಗ್ರಹಿಸಿದೆ.







