ಲೈಂಗಿಕ ಕಿರುಕುಳ ಪ್ರಕರಣ ಪಚೌರಿ ವಿರುದ್ಧ 500 ಪುಟಗಳ ಆರೋಪ ಪಟ್ಟಿ

ಹೊಸದಿಲ್ಲಿ, ಫೆ.14: ಸಂಶೋಧನಾ ಸಹಾಯಕಿಯೊಬ್ಬಳು ದಾಖಲಿಸಿದ್ದ ಲೈಂಗಿಕ ಕಿರುಕುಳ ಪ್ರಕರಣವೊಂದಕ್ಕೆ ಸಂಬಂಧಿಸಿ ವಿಜ್ಞಾನಿ ಆರ್.ಕೆ.ಪಚೌರಿ ವಿರುದ್ಧ 500 ಪುಟಗಳ ಆರೋಪ ಪಟ್ಟಿಯೊಂದಕ್ಕೆ ದಾಖಲಿಸುವ ಸಾಧ್ಯತೆಯಿದೆ. ಆರೋಪ ಪಟ್ಟಿಯು ಪಚೌರಿ ಕಳುಹಿಸಿರುವರೆನ್ನಲಾದ ಎಸ್‌ಎಂಎಸ್‌ಗಳು ಹಾಗೂ ಇ-ಮೇಲ್‌ಗಳನ್ನು ಒಳಗೊಂಡಿರಲಿದೆಯೆಂದು ಮೂಲಗಳು ತಿಳಿಸಿವೆ.
ಲಾಭೇತರ ಚಿಂತನ ಚಿಲುಮೆ ಟೆರಿಯಲ್ಲಿ ಕೆಲಸ ಮಾಡುತ್ತಿರುವ 29ರ ಹರೆಯದ ಸಂಶೋಧನಾ ಸಹಾಯಕಿಯೊಬ್ಬಳು, ಕಳೆದ ವರ್ಷ ಫೆಬ್ರವರಿಯಲ್ಲಿ ಪಚೌರಿಯ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಹೇರಿಸಿದ್ದಳು. ಈ ಹಿನ್ನೆಲೆಯಲ್ಲಿ ಪಚೌರಿಯವರ ಸ್ಥಾನದಲ್ಲಿ ಡಾ.ಅಜಯ್ ಮಾಥುರ್‌ರನ್ನು ಟೆರಿಯ ಮಹಾ ನಿರ್ದೇಶಕನನ್ನಾಗಿ ಸಂಸ್ಥೆಯ ಆಡಳಿತ ಮಂಡಳಿ ನೇಮಿಸಿತ್ತು.
ಆದರೆ, ಆಶ್ಚರ್ಯದ ನಡೆಯೊಂದರಲ್ಲಿ ಪಚೌರಿಗೆ ಕಾರ್ಯಕಾರಿ ಉಪಾಧ್ಯಕ್ಷನ ಸ್ಥಾನವನ್ನು ಟೆರಿ ಆಡಳಿತ ಮಂಡಳಿ ನೀಡಿತ್ತು. ಇದು ಮಹಿಳಾ ಹಕ್ಕು ಗುಂಪುಗಳು ಹಾಗೂ ಟೆರಿ ವಿವಿಯ ವಿದ್ಯಾರ್ಥಿಗಳ ಪ್ರತಿಭಟನೆಗೆ ಕಾರಣವಾಯಿತು. ಈ ವಾರ ಇನ್ನೊಬ್ಬಳು ಮಹಿಳೆ ಪಚೌರಿಯ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ ಬಳಿಕ, ಪಚೌರಿಗೆ ಅನಿರ್ದಿಷ್ಟಾವಧಿ ರಜೆಯಲ್ಲಿ ತೆರಳುವಂತೆ ಟೆರಿ ಆಡಳಿತ ಮಂಡಳಿ ಆದೇಶಿಸಿತ್ತು.





