ಮುಂಬೈ: ಮೇಕ್ ಇನ್ ಇಂಡಿಯಾ ಕಾರ್ಯಕ್ರಮದಲ್ಲಿ ಭಾರೀ ಅಗ್ನಿ ಅವಘಡ

ಮುಂಬೈ,ಫೆ.14: ಇಲ್ಲಿ ಆಯೋಜಿಸಲಾಗಿರುವ ‘‘ಮೇಕ್ ಇನ್ ಇಂಡಿಯಾ’’ ಸಪ್ತಾಹದಲ್ಲಿ ರವಿವಾರ ಸಂಜೆ ಸಾಂಸೃತಿಕ ಕಾರ್ಯಕ್ರಮ ನಡೆಯುತ್ತಿದ್ದಾಗ ಭಾರೀ ಬೆಂಕಿ ಅನಾಹುತ ಸಂಭವಿಸಿದ್ದು,ಅದೃಷ್ಟವಶಾತ್ ಯಾವುದೇ ಸಾವುನೋವುಗಳು ವರದಿಯಾಗಿಲ್ಲ. ಹಲವಾರು ವಿವಿಐಪಿಗಳು ಉಪಸ್ಥಿತರಿದ್ದ ವೇದಿಕೆಯ ಕೆಳಗೆ ಬೆಂಕಿ ಕಾಣಿಸಿಕೊಂಡು ಕ್ಷಣಾರ್ಧದಲ್ಲಿ ಇತರೆಡೆಗಳಿಗೆ ವ್ಯಾಪಿಸಿತ್ತು.
ಗಿರಗಾಂವ್ ಚೌಪಾಟಿಯಲ್ಲಿ ಏರ್ಪಡಿಸಲಾಗಿದ್ದ ‘‘ಮಹಾರಾಷ್ಟ್ರ ನೈಟ್’’ನ್ನು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಶಿವಸೇನೆಯ ಮುಖ್ಯಸ್ಥ ಉದ್ಧವ ಠಾಕ್ರೆ ಅವರು ಉದ್ಘಾಟಿಸಿದ್ದರು. ಬೆಂಕಿ ಅನಾಹುತ ಸಂಭವಿಸುವ ಕೆಲವೇ ಕ್ಷಣಗಳ ಮೊದಲು ಬಾಲಿವುಡ್‌ನ ಹಿರಿಯ ನಟ ಅಮಿತಾಬ್ ಬಚ್ಚನ್ ಅವರು ಸ್ಥಳದಿಂದ ತೆರಳಿದ್ದರು.
ಬೆಂಕಿ ಕಾಣಿಸಿಕೊಂಡ ತಕ್ಷಣ ಕಾರ್ಯಪ್ರವೃತ್ತರಾದ ಅಧಿಕಾರಿಗಳು ಜನರನ್ನು ಅಲ್ಲಿಂದ ತೆರವುಗೊಳಿಸುವಲ್ಲಿ ಯಶಸ್ವಿಯಾದರು.
ಅಧಿಕಾರಿಗಳ ಚುರುಕು ಕಾರ್ಯಾಚರಣೆಯನ್ನು ಪ್ರಶಂಸಿಸಿದ ಬಿಜೆಪಿ ನಾಯಕ ಆಶಿಷ್ ಶೇಳಾರ್ ಅವರು, ಅಧಿಕಾರಿಗಳಿಂದಾಗಿ ಹಲವಾರು ಜೀವಗಳು ಉಳಿದುಕೊಂಡವು ಎಂದು ಹೇಳಿದರು.
ಬೆಂಕಿ ನಿಯಂತ್ರಣ ಮೀರಿತ್ತು,ಅದೃಷ್ಟವಶಾತ್ ಜನರನ್ನು ಸಕಾಲದಲ್ಲಿ ತೆರವುಗೊಳಿಸಲಾಯಿತು. ಎಲ್ಲರೂ ಸುರಕ್ಷಿತವಾಗಿ ಪಾರಾಗಿದ್ದಾರೆ. ಘಟನೆ ಸಂಭವಿಸಿದಾಗ ಸುಮಾರು 20,000-25,000 ಜನರು ಅಲ್ಲಿದ್ದರು ಎಂದು ಬಿಜೆಪಿ ನಾಯಕಿ ಪೂನಂ ಮಹಾಜನ್ ತಿಳಿಸಿದರು.
ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಯಂತ್ರಗಳು ಬೆಂಕಿಯನ್ನು ಸಂಪೂರ್ಣವಾಗಿ ನಂದಿಸುವಲ್ಲಿ ಯಶಸ್ವಿಯಾದವು.





