ಜೆಡಿಎಸ್, ಬಿಜೆಪಿ ಸಾಧನೆ ಗುಜರಿ ಅಂಗಡಿಗಳಲ್ಲಿ ಮತ್ತು ಜೈಲಿನಲ್ಲಿ :ವೀರಪ್ಪ ಮೊಯಿಲಿ ಲೇವಡಿ

ಮೂಡುಬಿದಿರೆ : ಕಾಂಗ್ರೆಸ್ ಸರಕಾರ ಹಾಗೂ ಜನಪ್ರತಿನಿಧಿಗಳು ರಾಜ್ಯದ ಅಭಿವೃದ್ಧಿಗಾಗಿ ಪಣತೊಟ್ಟವರು. ಶಿಕ್ಷಣ ಮತ್ತು ಕೈಗಾರಿಕೆಗಳ ಮೂಲಕ ಯುವಜನತೆಗೆ ಹಲವಾರು ಉದ್ಯೋಗವನ್ನು ಕಲ್ಪಿಸಿಕೊಡುವ ಸಾಧನೆಯನ್ನು ಮಾಡಿ ಗುರುತಿಸಿಕೊಂಡಿದೆ. ಆದರೆ ಜೆಡಿಎಸ್ ಮತ್ತು ಬಿಜೆಪಿ ಅಧಿಕಾರದಲ್ಲಿದ್ದಾಗ ಮಾಡಿದ ಸಾಧನೆಗೆ ಸಾಕ್ಷಿಗಳೆಂದರೆ ಜೆಡಿಎಸ್ ನೀಡಿರುವ ಸೈಕಲ್‌ಗಲು ಗುಜರಿ ಅಂಗಡಿಗಳಲ್ಲಿ ಹಾಗೂ ಮುಖ್ಯ ಮಂತ್ರಿಯಾಗಿದ್ದಾಗಲೇ ಭ್ರಷ್ಠಾಚಾರದಿಂದಾಗಿ ಜೈಲಿಗೆ ಹೋದ ಯಡ್ಡಿಯ ಸಾಧನೆಗಳೇ ಸಾಕ್ಷಿಗಳಾಗಿವೆ ಎಂದು ಮಾಜಿ ಕೇಂದ್ರ ಸಚಿವ, ಹಾಲಿ ಸಂಸದ ಎಂ.ವೀರಪ್ಪ ಮೊಯಿಲಿ ಲೇವಡಿ ಮಾಡಿದರು.
ಅವರು ರವಿವಾರದಂದು ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಕಾಂಗ್ರೆಸ್ ಸರಕಾರವು ಅಭಿವೃದ್ಧಿ ಕೆಲಸಗಳಿಗಾಗಿ ಪಣತೊಟ್ಟರೆ, ಬಿಜೆಪಿ ಸರಕಾರವು ಅಧಿಕಾರದಲ್ಲಿದ್ದಾಗ ಸಮಸ್ಯೆಗಳನ್ನೇ ತರುವಲ್ಲಿಯೇ ಹಾತೊರೆಯುತ್ತಿತ್ತು. ನಾವು ಮಣ್ಣು ಹಾಕಿ ಸಮತಟ್ಟು ಮಾಡಿದ್ದರೆ ಬಿಜೆಪಿ ಸರಕಾರವು ಅದರ ಮೇಲೆ ಕಲ್ಲುಗಳನ್ನು ಎತ್ತಿ ಹಾಕುವ ಮೂಲಕ ಅಭಿವೃದ್ಧಿ ಜನಪರ ಕಾರ್ಯಕ್ರಮಗಳನ್ನು ಅನುಷ್ಠಾನವಾಗದಂತೆ ತಡೆಯುವಂತಹ ಕೆಲಸಗಳನ್ನು ಮಾಡುತ್ತಿತ್ತು. ಇವುಗಳ ಬಗ್ಗೆ ಜನರಿಗೆ ಮನವರಿಕೆ ಮಾಡುವಂತಹ ಕೆಲಸಗಳು ನಡೆಯಬೇಕಾಗಿದೆ.
ನಾವು ಅಧಿಕಾರದಲ್ಲಿದ್ದಾಗ ಉಳುವವನೇ ಹೊಲದೊಡೆಯ, ಕುಂಮ್ಕಿ ಹಕ್ಕನ್ನು, ಅಕ್ರಮ ಸಕ್ರಮ ಕಾನೂನುಗಳನ್ನು ಜಾರಿಗೆ ತಂದಿದ್ದೇವೆ ಆದರೆ ಇದೀಗ ಒಬ್ಬ ವ್ಯಕ್ತಿ ಈ ಕಾನೂನುಗಳನ್ನು ತಡೆ ಹಿಡಿಯುವಂತೆ ಸುಪ್ರಿಂ ಕೋರ್ಟ್‌ಗೆ ಹೋಗಿ ರದ್ದು ಮಾಡುವಂತೆ ಮನವಿ ಮಾಡಿದ್ದಾರೆ. ರದ್ದು ಮಾಡಿದರೂ ರೈತರು ಈ ಬಗ್ಗೆ ಹೆದರಬೇಕಾಗಿಲ್ಲ. ತಾನು ಈಗಾಗಲೇ ಮುಖ್ಯಮಂತ್ರಿ ಸಿದ್ಧರಾಮಯ್ಯನವರಲ್ಲಿ ಮಾತನಾಡಿಸಿದ್ದೇನೆ. ಕಾನೂನನ್ನು ತಿದ್ದುಪಡಿ ಮಾಡುವಂತಹ ಅವಕಾಶಗಳಿವೆ ಎಂದು ತಿಳಿಸಿದರು.
ಸಚಿವ ಕೆ. ಅಭಯಚಂದ್ರ ಜೈನ್ ಪ್ರಾಸ್ತಾವಿಕ ಮಾತುಗಳನ್ನಾಡಿ ಕಾಂಗ್ರೆಸ್ ಸರಕಾರವು ಮಾಡಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು.
ಪುರಸಭಾ ಅಧ್ಯಕ್ಷ ರೂಪಾ ಸಂತೋಷ್ ಶೆಟ್ಟಿ, ಉಪಾಧ್ಯಕ್ಷೆ ಶಕುಂತಲಾ ದೇವಾಡಿಗ, ಮೂಡಾ ಅಧ್ಯಕ್ಷ ಸುರೇಶ್ ಕೋಟ್ಯಾನ್, ಜಿ.ಪಂ ಅಭ್ಯರ್ಥಿ ಪ್ರಮೋದ್ ಕುಮಾರ್, ಅಕ್ರಮ ಸಕ್ರಮ ಅಧ್ಯಕ್ಷ ಪಿ.ಕೆ.ತೋಮಸ್, ಕಾಂಗ್ರೆಸ್ ಮುಖಂಡರುಗಳಾದ ಎಸ್.ಡಿ ಸಂಪತ್ ಸಾಮ್ರಾಜ್ಯ, ಜಿ.ಎ ಬಾವಾ, ಶಾಲೆಟ್ ಪಿಂಟೋ, ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಲೇರಿಯನ್ ಸಿಕ್ವೇರಾ ಸ್ವಾಗತಿಸಿದರು. ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ರತ್ನಾಕರ ಸಿ.ಮೊಯಿಲಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
* ಕುಂಮ್ಕಿ ಹಕ್ಕಿನ ಜ್ಞಾನವಿಲ್ಲದ ಸಂಸದ : ಕುಂಮ್ಕಿ ಹಕ್ಕಿನ ಬಗ್ಗೆ ಸರಿಯಾದ ಜ್ಞಾನವಿಲ್ಲದೆ ಸಂಸದ ನಳಿನ್ ಕಟೀಲ್ ಏನೇನೋ ಮಾತನಾಡುತಿದ್ದಾರೆ. ಮೊದಲು ಕುಂಮ್ಕಿ ಹಕ್ಕು ಎಂದರೇನು ಎಂಬುದರ ಬಗ್ಗೆ ಅವರು ತಿಳಿದುಕೊಳ್ಳಬೇಕಾಗಿದೆ.
* ಪಾಪ ಮಾಡಿದರವರು ಜೈಲಿಗೆ : ಅಧಿಕಾರದಲ್ಲಿ ಆಸೆಯಿಂದ ಅಧಿಕಾರದ ಗದ್ದುಗೆಯನ್ನು ಏರಿ ಮುಖ್ಯ ಮಂತ್ರಿಯಾಗಿದ್ದ ಯಡ್ಡಿಯೂರಪ್ಪ ಅವರು ಯಾವುವೇ ಕೆಲಸಕ್ಕೆ ಹೋದಾಗ ತನ್ನ ಹಿಂದೆ ಶೋಭಾ ಕರಂದ್ಲಾಜೆಯನ್ನು ಕರೆದುಕೊಂಡು ಹೋಗುತ್ತಿದ್ದರು ಮತ್ತು ಭ್ರಷ್ಠಾಚಾರದಲ್ಲಿ ತೊಡಗಿಸಿಕೊಂಡಿದ್ದರು ಆದರೆ ಜೈಲಿಗೆ ಹೋಗುವಾಗ ತಾನು ಮಾಡಿದ ಪಾಪದ ಜೊತೆಗೆ ಒಬ್ಬರೇ ಹೋದರು ಎಂದು ವ್ಯಂಗ್ಯವಾಡಿದರು.
* ಬಿಜೆಪಿ-ಜೆಡಿಎಸ್ ನೀರ ಮೇಲಿನ ಗುಳ್ಳೆಗಳು : ಕಾಂಗ್ರೆಸ್ ಯಾವತ್ತಿದ್ದರೂ ಗಟ್ಟಿಯಾದ ಪಕ್ಷ ಆದರೆ ಬಿಜೆಪಿ ಮತ್ತು ಜೆಡಿಎಸ್ ಅಧಿಕಾರ ಕೇವಲ ನೀರ ಮೇಲಿನ ಗುಳ್ಳೆಗಳಿದ್ದಂತೆ ಯಾವಾಗ ಬೇಕಾದರೂ ಒಡೆದು ಹೋಗಬಹುದು ಎಂದರು.







