ಲಚ್ಚಿ ತುಳು ಟೆಲಿಚಿತ್ರ ಪ್ರದರ್ಶನ
ಉಡುಪಿ, ಫೆ.14: ಕಟಪಾಡಿಯ ದಿಶಾ ಕಮ್ಯುನಿಕೇಷನ್ಸ್ ಅರ್ಪಿಸುವ ಮಹಿಳಾ ಮಾರಾಟ ಮತ್ತು ದೌರ್ಜನ್ಯದ ವಿರುದ್ಧ ಜಾಗೃತಿ ಮೂಡಿಸುವ ‘ಲಚ್ಚಿ’ ತುಳು ಟೆಲಿಚಿತ್ರದ ಪ್ರದರ್ಶನವನ್ನು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಅಣ್ಣಾಮಲೈ ಶನಿವಾರ ಉಡುಪಿ ಜಿಲ್ಲಾ ಪೊಲೀಸ್ ಕಚೇರಿ ಸಭಾಂಗಣದಲ್ಲಿ ಉದ್ಘಾಟಿಸಿದರು.
ಮಹಿಳೆಯರ ಹಾಗೂ ಮಕ್ಕಳ ಮಾರಾಟ ಸಮಸ್ಯೆಯು ದೇಶದ ದೊಡ್ಡ ಪಿಡುಗು ಆಗಿದೆ. ಇದು ಜಾಗತಿಕ ಮಟ್ಟದಲ್ಲಿರುವ ಬೃಹತ್ ದಂಧೆಯಾಗಿದೆ. ಇದಕ್ಕೆ ಗ್ರಾಮೀಣ ಪ್ರದೇಶದ ಜನರೇ ಗುರಿಯಾಗಿರುತ್ತಾರೆ. ಇದರ ಬಗ್ಗೆ ಟೆಲಿ ಚಿತ್ರದ ಮೂಲಕ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ ಎಂದು ಎಸ್ಪಿ ಹೇಳಿದರು.
ಈ ಸಂದರ್ಭ ಸಮಾಜ ಸೇವಕರಾದ ಬೇಬಿ ಎಚ್‌ಸಾಲ್ಯಾನ್ ಹಾಗೂ ಎಲಿಝಬೆತ್ ಸುನೀಲ್ ಜಾನ್ ಡಿಸೋಜರನ್ನು ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳಾಗಿ ಉದ್ಯಮಿ ಕೆ.ಸತ್ಯೇಂದ್ರ ಪೈ, ಉಡುಪಿ ತುಳುಕೂಟದ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಉಪಸ್ಥಿತರಿದ್ದರು.
ನಿರ್ದೇಶಕ ಪ್ರಕಾಶ್ ಸುವರ್ಣ ಕಟಪಾಡಿ ಸ್ವಾಗತಿಸಿದರು. ಉಪನ್ಯಾಸಕ ಪ್ರೊ. ಸುರೇಶ್ ರೈ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿ.ಪುಂಡಲೀಕ ಮರಾಠೆ ವಂದಿಸಿದರು. ಗಂಗಾಧರ್ ಕಾಂಚನ್ ಕಾರ್ಯಕ್ರಮ ನಿರೂಪಿಸಿದರು.





