ಮಲ್ಪೆ: ಬೋಟ್‌ನಿಂದ ಬಿದ್ದು ಮೀನುಗಾರ ಸಮುದ್ರಪಾಲು
ಮಲ್ಪೆ, ಫೆ.14: ಆಳಸಮುದ್ರ ಮೀನುಗಾರಿಕೆ ಮಾಡುತ್ತಿದ್ದ ವೇಳೆ ಬೋಟ್‌ನಿಂದ ಸಮುದ್ರಕ್ಕೆ ಬಿದ್ದು ಮೀನುಗಾರರೊಬ್ಬರು ನಾಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ. ನಾಪತ್ತೆಯಾದವರನ್ನು ಮಲ್ಪೆ ವಡಂಬಂಡೇಶ್ವರ ನಿವಾಸಿ ಗೋಪಾಲ್ ಸುವರ್ಣ(60) ಎಂದು ಗುರುತಿಸಲಾಗಿದೆ. ಫೆ.11ರಂದು ಸಂಜೆ ಆರು ಗಂಟೆಗೆ ಮಲ್ಪೆ ಬಂದರಿನಿಂದ ಕೃಷ್ಣ ಕುಮಾರ ಎಂಬ ಬೋಟಿನಲ್ಲಿ 22 ಮಂದಿ ಸಮುದ್ರದಲ್ಲಿ ಮೀನುಗಾರಿಕೆ ನಡೆಸಲು ತೆರಳಿದ್ದು, ಆಳ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾಗ ರಾತ್ರಿ 11 ಗಂಟೆ ಸುಮಾರಿಗೆ ಗೋಪಾಲ್ ಸುವರ್ಣ ಬೋಟಿನ ಬದಿಯಲ್ಲಿ ನಿಂತು ಮೂತ್ರ ವಿಸರ್ಜನೆಗೈಯುತ್ತಿದ್ದರು. ಆ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದದ್ದು, ಉಳಿದವರು ಕೂಡಲೇ ಜಾಕೆಟ್ ಮತ್ತು ಹಗ್ಗ ಎಸೆದು ಅವರನ್ನು ರಕ್ಷಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಗೋಪಾಲ್ ಸುವರ್ಣ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದು,ಹುಡುಕಾಟ ನಡೆಸಲಾಗುತ್ತಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





