ಅಂಟಾರ್ಕ್ಟಿಕಾ: ಕುಸಿದ ಹಿಮದ ಬೆಟ್ಟ; 1.50 ಲಕ್ಷ ಪೆಂಗ್ವಿನ್‌ಗಳ ಸಾವು
ಸಿಡ್ನಿ,ಫೆ.14: ಅಂಟಾರ್ಕ್ಟಿಕಾದಲ್ಲಿ ಬೃಹತ್ ಹಿಮದಬೆಟ್ಟವೊಂದು ಒಡೆದುಹೋದ ಬಳಿಕ ಆಹಾರ ಹಾಗೂ ನೆಲೆಯನ್ನು ಕಳೆದುಕೊಂಡ 1.50 ಲಕ್ಷಕ್ಕೂ ಅಧಿಕ ಪೆಂಗ್ವಿನ್ ಪಕ್ಷಿಗಳು ಸಾವನ್ನಪ್ಪಿರುವುದಾಗಿ ನೂತನವಾಗಿ ಪ್ರಕಟವಾದ ಅಧ್ಯಯನ ವರದಿಯೊಂದು ತಿಳಿಸಿದೆ.
ಅಂಟಾರ್ಕ್ಟಿಕಾದ ಕಾಮನ್‌ವೆಲ್ತ್ ಕೊಲ್ಲಿಯಲ್ಲಿರುವ ಸುಮಾರು 100 ಚದರ ಕಿ.ಮೀ. ವಿಸ್ತೀರ್ಣದ ‘ಬಿಒ9ಬಿ’ ಎಂದು ಹೆಸರಿಸಲಾದ ಹಿಮಬೆಟ್ಟವು 2010ರ ಡಿಸೆಂಬರ್‌ನಲ್ಲಿ ಒಡೆದುಹೋಗಿತ್ತೆಂದು ಆಸ್ಟ್ರೇಲಿಯ ಹಾಗೂ ನ್ಯೂಝಿಲ್ಯಾಂಡ್‌ನ ಸಂಶೋಧಕರು, ಅಂಟಾರ್ಕ್ಟಿಕ್ ಸಯನ್ಸ್ ಜರ್ನಲ್ ಪತ್ರಿಕೆಯಲ್ಲಿ ಪ್ರಕಟಿಸಿದ ಅಧ್ಯಯನ ವರದಿಯಲ್ಲಿ ತಿಳಿಸಿದ್ದಾರೆ. ಹಿಮಗಡ್ಡೆ ಕುಸಿದ ಸಂದರ್ಭದಲ್ಲಿ ಅಲ್ಲಿನ ಪೆಂಗ್ವಿನ್‌ಗಳ ವಸಾಹತಿನಲ್ಲಿ 1.60 ಲಕ್ಷಕ್ಕೂ ಅಧಿಕ ಪೆಂಗ್ವಿನ್ ಪಕ್ಷಿಗಳಿದ್ದವು. ಆದರೆ 2013ರ ವೇಳೆಗೆ ಅವುಗಳ ಸಂಖ್ಯೆ ಕೇವಲ 1 0 ಸಾವಿರಕ್ಕೆ ಇಳಿದಿತ್ತು. ಹಿಮದ ಬೆಟ್ಟ ಒಡೆದ ಪರಿಣಾಮವಾಗಿ ಪೆಂಗ್ವಿನ್‌ಗಳು ಆಹಾರ ಹುಡುಕಲು 60 ಕಿ.ಮೀ. ದೂರದವರೆಗೂ ನಡೆಯಬೇಕಾಯಿತು. ಇದರ ಪರಿಣಾಮವಾಗಿ ಅವುಗಳ ಸಂತಾನೋತ್ಪತ್ತಿ ಪ್ರಮಾಣವು ಕುಸಿಯಿತೆಂದು ನ್ಯೂಸೌತ್‌ವೆಲ್ಸ್ ವಿವಿಯ ಹವಾಮಾನ ಬದಲಾವಣೆ ಕುರಿತ ಸಂಶೋಧನಾ ಕೇಂದ್ರ ಹಾಗೂ ನ್ಯೂಝಿಲ್ಯಾಂಡ್‌ನ ಪಶ್ಟಿಮಕರಾವಳಿಯ ಪೆಂಗ್ವಿನ್ ಟ್ರಸ್ಟ್‌ನ ಸಂಶೋಧಕರು ತಿಳಿಸಿದ್ದಾರೆ.





