ಯಮನ್ ಬಂಡುಕೋರರ ಕ್ಷಿಪಣಿ ಹೊಡೆದುರುಳಿಸಿದ ಸೌದಿ
ರಿಯಾದ್,ಫೆ.14: ಯಮನ್ ಬಂಡುಕೋರರು ಎಸೆದಿರುವ ಸ್ಕಡ್ ಕ್ಷಿಪಣಿಯನ್ನು ಸೌದಿ ಅರೇಬಿಯ ಹೊಡೆದುರುಳಿಸಿದೆ. ಯಮನ್‌ನಲ್ಲಿ ಶಿಯಾ ಬಂಡುಕೋರರ ವಿರುದ್ಧ ಹೋರಾಡುತ್ತಿರುವ ಸೌದಿ ನೇತೃತ್ವದ ಮೈತ್ರಿಕೂಟವು ರವಿವಾರ ಈ ಬಗ್ಗೆ ಹೇಳಿಕೆಯೊಂದನ್ನು ನೀಡಿ, ಸೌದಿ ಅರೇಬಿಯದ ನೈಋತ್ಯ ಭಾಗದ ನಗರವಾದ ಖಾಮಿಸ್ ಮುಶೈತ್‌ನೆಡೆಗೆ ಸಾಗುತ್ತಿದ್ದ ಕ್ಷಿಪಣಿಯನ್ನು ಸೌದಿ ವಾಯು ರಕ್ಷಣಾ ದಳವು ಹೊಡೆದುರುಳಿಸಿದೆಯೆಂದು ತಿಳಿಸಿದೆ.
ನೆಲದಲ್ಲಿ ಯಾವುದೇ ಹಾನಿ ಸಂಭವಿಸದ ರೀತಿಯಲ್ಲಿ ಕ್ಷಿಪಣಿಯನ್ನು ಸಂಪೂರ್ಣವಾಗಿ ನಾಶಪಡಿಸಲಾಯಿತೆಂದು ಹೇಳಿಕೆಯು ತಿಳಿಸಿದೆ.
ಖಾಮಿಸ್ ಮುಶೈತ್‌ನಲ್ಲಿ ಸೌದಿ ವಾಯುಪಡೆ ನೆಲೆಯಿದ್ದು, ಈ ಹಿಂದೆಯೂ ಯಮನ್ ಬಂಡುಕೋರರು ಅದರ ಮೇಲೆ ಕ್ಷಿಪಣಿ ದಾಳಿ ನಡೆಸಿದ್ದರು. ಯೆಮೆನ್ ಸರಕಾರದ ಬೆಂಬಲದೊಂದಿಗೆ ಸೌದಿ ಅರೇಬಿಯವು, ಯಮನ್ ರಾಜಧಾನಿ ಹಾಗೂ ಇತರ ಪ್ರದೇಶಗಳ ಮೇಲೆ ನಿಯಂತ್ರಣ ಹೊಂದಿರುವ ಮಾಜಿ ಅಧ್ಯಕ್ಷರ ಬೆಂಬಲಿಗರು ಹಾಗೂ ಶಿಯಾ ಬಂಡುಕೋರರ ವಿರುದ್ಧ ವಾಯುದಾಳಿ ಹಾಗೂ ಸೇನಾ ಕಾರ್ಯಾಚರಣೆಗಳನ್ನು ನಡೆಸುತ್ತಿದೆ.
Next Story





