ಅಕ್ರಮ ಮದ್ಯ ಸಂಗ್ರಹ: ಓರ್ವ ಸೆರೆ
ಪುತ್ತೂರು, ಫೆ.14: ಪುತ್ತೂರು ತಾಲೂಕಿನ ನಿಡ್ಪಳ್ಳಿ ಗ್ರಾಮದ ನುಳಿಯಾಲು ಎಂಬಲ್ಲಿ ಅಬಕಾರಿ ಪೊಲೀಸರು ಶನಿವಾರ ಸಂಜೆ ಕಾರ್ಯಾಚರಣೆ ನಡೆಸಿ ಮನೆಯೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಮದ್ಯವನ್ನು ಪತ್ತೆಹಚ್ಚಿ ಓರ್ವನ್ನು ಬಂಧಿಸಿದ್ದಾರೆ.
ನಿಡ್ಪಳ್ಳಿ ಗ್ರಾಮದ ನುಳಿಯಾಲು ನಿವಾಸಿ ಚಂದ್ರಶೇಖರ್ ಬಂಧಿತ ಆರೋಪಿ. ಆರೋಪಿಯು ತನ್ನ ಮನೆಯಲ್ಲಿ 8.640 ಲೀಟರ್ ಮದ್ಯವನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದರು. ತಾಪಂ ಮತ್ತು ಜಿಪಂ ಚುನಾವಣೆ ಹಿನ್ನೆಲೆಯಲ್ಲಿ ಪುತ್ತೂರು ಉಪವಿಭಾಗದ ಕಚೇರಿಯ ಅಬಕಾರಿ ಉಪ ಅಧೀಕ್ಷಕ ಚಂದ್ರಪ್ಪರ ಆದೇಶದ ಮೇರೆಗೆ ಪುತ್ತೂರು ವಲಯ ಅಬಕಾರಿ ನಿರೀಕ್ಷಕ ಶಿವಪ್ರಸಾದ್ ನೇತೃತ್ವದಲ್ಲಿ ಅಬಕಾರಿ ನಿರೀಕ್ಷಕ ನವೀನ್ ಕುಮಾರ್ ಮತ್ತು ಸಿಬ್ಬಂದಿ ಉಮೇಶ್, ಪ್ರವೀಣ್, ಪದ್ಮನಾಭ ಮತ್ತು ವಾಹನ ಚಾಲಕ ಬಾಲಕೃಷ್ಣ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಆರೋಪಿಯನ್ನು ಬಂಧಿಸಿದ ಅಬಕಾರಿ ಪೊಲೀಸರು ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ವಿಚಾರಣೆ ನಡೆಸಿದ ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
Next Story





