ಬೇಡಿ ಪಡೆದುಕೊಂಡ ಅವಮಾನ
ಭಯೋತ್ಪಾದನೆಯ ಕುರಿತಂತೆ ಅಮೆರಿಕದ ದ್ವಂದ್ವ ನಿಲುವು ಮತ್ತೊಮ್ಮೆ ಬಯಲಾಗಿದೆ. ಭಾರತದ ತೀವ್ರ ಪ್ರತಿಭಟನೆಯ ನಡುವೆಯೂ ಪಾಕಿಸ್ತಾನಕ್ಕೆ 700 ಮಿಲಿಯನ್ ಡಾಲರ್ ವೌಲ್ಯದ ಎಂಟು ಎಫ್-16 ಯುದ್ಧ ವಿಮಾನ ಮತ್ತು ಇತರ ಯುದ್ಧೋಪಕರಣಗಳ ಮಾರಾಟಕ್ಕೆ ಅಧಿಸೂಚನೆ ನೀಡಿದೆ. ಅಮೆರಿಕದ ಈ ನಿರ್ಧಾರ ಭಾರತದ ಉಪಖಂಡದಲ್ಲಿ ಆತಂಕ ಮತ್ತು ಯುದ್ಧ ಭೀತಿಯನ್ನು ಹೆಚ್ಚಿಸಿದೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಭಯೋತ್ಪಾದನೆಯ ವಿರುದ್ಧ ಮಾತನಾಡುತ್ತಲೇ ಉಗ್ರರಿಗೆ ನೆಲೆ ನೀಡಿರುವ ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರ ಪೂರೈಸುತ್ತಿರುವ ಅಮೆರಿಕದ ನಿರ್ಧಾರ ಭಾರತಕ್ಕೆ ತೀವ್ರ ಮುಖಭಂಗ ಉಂಟು ಮಾಡಿದೆ. ಭಯೋತ್ಪಾದನೆಯ ವಿರುದ್ಧ ಹೋರಾಟಕ್ಕಾಗಿ ಈ ಶಸ್ತ್ರಾಸ್ತ್ರವನ್ನು ಅಮೆರಿಕ ಪೂರೈಸುತ್ತಿದೆಯಾದರೂ, ಅಂತಿಮವಾಗಿ ಇದು ಬಳಸಲ್ಪಡುವುದು ಭಾರತಕ್ಕೆ ವಿರುದ್ಧವಾಗಿ ಎನ್ನುವುದು ಗುಟ್ಟಾಗಿಯೇನೂ ಉಳಿದಿಲ್ಲ. ಭಯೋತ್ಪಾದನೆಯ ವಿರುದ್ಧ ಹೋರಾಟಕ್ಕಾಗಿ ಅಮೆರಿಕದಿಂದ ಪಡೆದ ಸಹಾಯಗಳನ್ನು ಪಾಕಿಸ್ತಾನವೂ ಭಾರತಕ್ಕೆ ವಿರುದ್ಧವಾಗಿ ಬಳಸುತ್ತಿರುವುದು ಅಮೆರಿಕಕ್ಕೆ ಗೊತ್ತಿರದ ಸಂಗತಿಯಲ್ಲ. ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರಗಳನ್ನು ಪೂರೈಸುವ ಮೂಲಕ, ಭಾರತಕ್ಕೆ ಅಭದ್ರತೆಯನ್ನು ನಿರ್ಮಿಸುವುದು ಮತ್ತು ಜಾಗತಿಕವಾಗಿ ಯುದ್ಧೋಪಕರಗಳ ವ್ಯಾಪಾರಕ್ಕೆ ಇನ್ನಷ್ಟು ಕುಮ್ಮಕ್ಕು ನೀಡುವುದು ಅಮೆರಿಕದ ಉದ್ದೇಶ. ಒಂದು ರೀತಿಯಲ್ಲಿ ಪಾಕಿಸ್ತಾನದ ಹೆಗಲಲ್ಲಿ ಕೋವಿಯಿಟ್ಟು ಭಾರತವನ್ನು ಅಮೆರಿಕ ಬೆದರಿಸುತ್ತಿದೆ. ಮೋದಿ ಅಧಿಕಾರಕ್ಕೆ ಬಂದ ಬಳಿಕ ಅವರು ವಿದೇಶಗಳಲ್ಲೇ ಬೀಡು ಬಿಟ್ಟಿದ್ದಾರಾದರೂ, ಭಾರತದ ಪರವಾಗಿ ಜಾಗತಿಕ ಮಟ್ಟದಲ್ಲಿ ಅಭಿಪ್ರಾಯವನ್ನು ನಿರ್ಮಿಸುವಲ್ಲಿ ಸಂಪೂರ್ಣ ವಿಫಲವಾಗಿದ್ದಾರೆ ಎನ್ನುವುದಕ್ಕೆ ಅಮೆರಿಕದ ನಿರ್ಧಾರವೇ ಸಾಕ್ಷಿ. ಭಾರತದ ವಿದೇಶಾಂಗ ನೀತಿ ಅತ್ಯಂತ ಗೊಂದಲಮಯವಾಗಿದೆ. ನೆಹರೂ ಅವರು ರೂಪಿಸಿದ ‘ಅಲಿಪ್ತ ನೀತಿ’ ವಿಶ್ವದಲ್ಲೇ ಭಾರತಕ್ಕೆ ಒಂದು ಸ್ಥಾನಮಾನವನ್ನು ಕಲ್ಪಿಸಿಕೊಟ್ಟಿತ್ತು. ಅತ್ತ ಅಮೆರಿಕ, ಇತ್ತ ರಶ್ಯ ಎರಡರಲ್ಲೂ ಗುರುತಿಸಿಕೊಳ್ಳದೆ ತೃತೀಯ ಶಕ್ತಿಯಾಗಿ ಭಾರತ ವಿಶ್ವದಲ್ಲಿ ಗುರುತಿಸಿಕೊಳ್ಳಬೇಕು ಎಂದು ಅವರು ಬಯಸಿದ್ದರು. ಇಂದಿರಾಗಾಂಧಿಯ ಕಾಲದವರೆಗೂ ಭಾರತ ಮೂರನೆಯ ಶಕ್ತಿಯಾಗಿ ತನ್ನ ವರ್ಚಸ್ಸನ್ನು ಉಳಿಸಿಕೊಂಡಿತ್ತು. ಆದರೆ ಇಂದಿರಾಗಾಂಧಿಯ ಬಳಿಕ ಭಾರತದ ವಿದೇಶಾಂಗ ನೀತಿ ನಿಧಾನಕ್ಕೆ ದುರ್ಬಲಗೊಳ್ಳತೊಡಗಿತು. ಪ್ರಧಾನಿ ನರಸಿಂಹ ರಾವ್ ಕಾಲದಲ್ಲಿ ಭಾರತದ ಒಲವು ನಿಧಾನಕ್ಕೆ ಅಮೆರಿಕದ ಕಡೆಗೆ ವಾಲತೊಡಗಿತು. ಸೋವಿಯತ್ ರಶ್ಯದ ಪತನದ ಬಳಿಕ ಭಾರತದ ಗೊಂದಲಗಳು ತೀವ್ರಗೊಂಡವು. ಮುಂದೆ ಎನ್‌ಡಿಎ ಸರಕಾರದ ಅವಧಿಯಲ್ಲಿ ಭಾರತ ಸರಕಾರ ಬಹಿರಂಗವಾಗಿ ಅಮೆರಿಕವನ್ನು ಓಲೈಸತೊಡಗಿದವು. ಇರಾಕ್‌ನ ವಿರುದ್ಧ ಯುದ್ಧದ ಸಂದರ್ಭದಲ್ಲಿ ಅಮೆರಿಕದ ಸ್ನೇಹಕ್ಕಾಗಿ ಮಿತ್ರ ರಾಷ್ಟ್ರದ ವಿರುದ್ಧವೇ ಭಾರತ ನಿಲುವನ್ನು ತಳೆಯಿತು. ಇದು ಉಳಿದ ಅಲಿಪ್ತ ರಾಷ್ಟ್ರಗಳ ಮುಂದೆ ಭಾರತದ ವರ್ಚಸ್ಸನ್ನು ಕೆಳಗಿಳಿಸಿತು. ಮೋದಿ ಅಧಿಕಾರಾವಧಿಯಲ್ಲಿ, ಅಮೆರಿಕಕ್ಕೆ ತಾನು ಪಾಕಿಸ್ತಾನಕ್ಕಿಂತ ಹೆಚ್ಚು ನಿಷ್ಠ ಎಂದು ತೋರ್ಪಡಿಸಲು ಭಾರತ ಹರಸಾಹಸ ಪಡುತ್ತಿದೆ. ಆ ಸಾಹಸ ವಿಫಲವಾಗಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ ಅಮೆರಿಕದ ಶಸ್ತ್ರಾಸ್ತ್ರ ಪೂರೈಕೆ ನಿರ್ಧಾರ. ಇಂತಹದೊಂದು ಅವಮಾನವನ್ನು ಭಾರತ ಸರಕಾರವು ಅಮೆರಿಕದಿಂದ ಕಾಡಿ, ಬೇಡಿ ಪಡೆದುಕೊಂಡಿದೆ. ಇದು ನಿಜಕ್ಕೂ ವಿಷಾದನೀಯ ಸಂಗತಿಯಾಗಿದೆ.ಮೆರಿಕದ ನಿರ್ಧಾರವನ್ನು ಪ್ರಶ್ನಿಸಿ, ಅಮೆರಿಕನ್ ರಾಯಭಾರಿಗೆ ಭಾರತ ಸಮನ್ಸ್ ಕಳುಹಿಸಿ ತನ್ನ ಅಸಮಾಧಾನವನ್ನು ವ್ಯಕ್ತಪಡಿಸಿದೆ. ಆದರೆ ಈ ಅಸಮಾಧಾನ, ಭಾರತದ ನಿಲುವನ್ನು ಇನ್ನಷ್ಟು ಗೊಂದಲಗೊಳಿಸಿದೆ. ಒಂದೆಡೆ ಬಿಜೆಪಿಯ ಮುಖಂಡರೊಬ್ಬರು ಪಾಕಿಸ್ತಾನವನ್ನು ‘ಭಯೋತ್ಪಾದಕ ರಾಷ್ಟ್ರ’ ಎಂದು ಘೋಷಿಸಲು ಒತ್ತಾಯಿಸುತ್ತಾರೆ. ಮಗದೊಂದೆಡೆ ಅವರದೇ ಸರಕಾರದ ಪ್ರಧಾನಿ, ಕೆಲವೇ ದಿನಗಳ ಹಿಂದೆ ಆ ದೇಶಕ್ಕೆ ಭೇಟಿ ನೀಡಿ, ತನ್ನ ಸ್ನೇಹವನ್ನು ವ್ಯಕ್ತಪಡಿಸಿ ಬಂದಿದ್ದಾರೆ. ಇದರಲ್ಲಿ ಪಾಕಿಸ್ತಾನದ ಕುರಿತಂತೆ ಭಾರತದ ನಿಜವಾದ ನಿಲುವು ಏನು ಎನ್ನುವುದರಲ್ಲಿ ಗೊಂದಲ ಇದೆ. ಭಾರತದಲ್ಲಿ ನಡೆದಿರುವ ಹಲವು ಸ್ಫೋಟಗಳಿಗೆ ಭಾರತ, ಪಾಕಿಸ್ತಾನವನ್ನು ಹೊಣೆ ಮಾಡಿದೆ. ಇತ್ತೀಚೆಗೆ ನಡೆದ ಪಠಾಣ್‌ಕೋಟ್ ದಾಳಿಯಲ್ಲೂ ಪಾಕಿಸ್ತಾನದ ಪಾತ್ರವಿದೆ ಎಂದು ಭಾರತ ನಂಬಿದೆ. ಹೇಡ್ಲಿ ಸಾಕ್ಷ ವಿಚಾರಣೆಯ ಸಂದರ್ಭದಲ್ಲಿ ಆತ ‘ಮುಂಬೈ ದಾಳಿಯಲ್ಲಿ ಪಾಕಿಸ್ತಾನದ ಪಾತ್ರ’ವನ್ನು ಸಂಪೂರ್ಣ ಬಹಿರಂಗಪಡಿಸಿದ್ದಾನೆ ಎಂದೂ ಭಾರತ ಹೇಳಿಕೊಳ್ಳುತ್ತಿದೆ. ಆದರೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಇದನ್ನು ಸಾಬೀತು ಪಡಿಸಲು ಸರಕಾರ ಸಂಪೂರ್ಣ ವಿಫಲವಾಗಿದೆ. ಆದುದರಿಂದಲೇ ಅಮೆರಿಕ ಮುಕ್ತವಾಗಿ ಪಾಕಿಸ್ತಾನದ ಜೊತೆಗೆ ಸ್ನೇಹವನ್ನು ಉಳಿಸಿಕೊಂಡಿದೆ. ಭಾರತದಲ್ಲಿ ಅಮಾಯಕ ಮುಸ್ಲಿಮರನ್ನು ಉಗ್ರರು, ಭಯೋತ್ಪಾದಕರು ಎಂದು ಜೈಲಿಗೆ ತಳ್ಳಿದಷ್ಟು ಸುಲಭದ ವಿಷಯವಲ್ಲ ಇದು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಂದು ದೇಶದ ವಿರುದ್ಧ ಅಭಿಪ್ರಾಯ ರೂಪಿಸುವಾಗ, ಅದಕ್ಕೆ ಬೇಕಾದ ದಾಖಲೆಗಳನ್ನು ಸರಕಾರ ಹೊಂದಿರಬೇಕಾಗುತ್ತದೆ. ಇಲ್ಲಿ ನೋಡಿದರೆ, ಜೆಎನ್‌ಯುನಲ್ಲಿ ನಡೆದ ಪ್ರತಿಭಟನೆಗೂ ಭಾರತ ಸರಕಾರ ಪಾಕಿಸ್ತಾನವನ್ನು ಹೊಣೆ ಮಾಡುತ್ತದೆ. ಅಲ್ಲಿಯ ಉಗ್ರನ ಕುಮ್ಮಕ್ಕಿನಿಂದ ಇಲ್ಲಿ ಪ್ರತಿಭಟನೆ ನಡೆಯುತ್ತದೆ ಎಂಬ ಬೇಜವಾಬ್ದಾರಿ ಹೇಳಿಕೆಯನ್ನು ಗೃಹ ಸಚಿವರು ನೀಡುತ್ತಾರೆ. ಅದಕ್ಕೆ ಯಾವುದೇ ದಾಖಲೆಗಳು, ಸಾಕ್ಷಗಳು ಬೇಕಾಗಿಲ್ಲ. ಜೆಎನ್‌ಯುವಿನ ವಿಶ್ವಾಸಾರ್ಹತೆಯನ್ನು ಕುಗ್ಗಿಸುವುದಷ್ಟೇ ಅವರ ರಾಜಕೀಯ ಅಜೆಂಡಾ. ಒಬ್ಬ ವಿದ್ಯಾರ್ಥಿಯನ್ನು ಅನವಶ್ಯವಾಗಿ ದೇಶದ್ರೋಹ ಆರೋಪದಲ್ಲಿ ಬಂಧಿಸಿ, ಅದನ್ನು ಸಮರ್ಥಿಸಲು ಎಲ್‌ಇಟಿಯಂತಹ ಉಗ್ರ ಸಂಘಟನೆಯ ಹೆಸರನ್ನು ಬಳಸಿಕೊಳ್ಳುವ ಸರಕಾರ, ಭಯೋತ್ಪಾದನೆ ಎನ್ನುವ ವಿಷಯವನ್ನು ಎಷ್ಟು ಹಗುರವಾಗಿ ತೆಗೆದುಕೊಂಡಿದೆ ಎನ್ನುವುದಕ್ಕೆ ಉದಾಹರಣೆಯಾಗಿದೆ. ಈ ಸರಕಾರದ ಮಾತುಗಳನ್ನು ದೇಶದ ಜನರೇ ನಂಬಲು ಸಿದ್ಧರಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿರುವಾಗ, ಅಮೆರಿಕದಂತಹ ದೇಶ ಅದನ್ನು ನಂಬಬೇಕು ಎಂದು ನಾವು ಬಯಸಿದರೆ ಅದು ಸಾಧ್ಯವಾಗುವ ಮಾತೇ?





